ಶಿವಮೊಗ್ಗ: ಮಂಗಗಳಿಗೆ ವಿಷವುಣಿಸಿ ಸಾಮೂಹಿಕ ಕೊಲೆ ಆರೋಪ; ಐವರ ಬಂಧನ

Update: 2020-09-30 15:27 GMT

ಶಿವಮೊಗ್ಗ, ಸೆ.30: ಮಂಗಗಳ ಶವ ಎಸೆಯುವ ಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಧಿಡೀರ್ ದಾಳಿ ನಡೆಸಿ ಆರೋಪಿಗಳನ್ನು ವಾಹನ ಸಹಿತ ಬಂಧಿಸಿರುವ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.

ಸಾಗರ ತಾಲೂಕು ಆನಂದಪುರ ಸಮೀಪದ ಹೊಸೂರು ಗ್ರಾ.ಪಂ.ವ್ಯಾಪ್ತಿಯ ಚಿಪ್ಪಳಿ ಕಾಡಿನಲ್ಲಿ ಘಟನೆ ನಡೆದಿದ್ದು, ಮಂಗಗಳನ್ನು ವಿಷ ನೀಡಿ ಸಾಮೂಹಿಕವಾಗಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ತ್ಯಾಗರ್ತಿ ಗ್ರಾಮದ ವಿಶ್ವನಾಥ(32) ಮತ್ತು ದಸ್ತಗಿರ್ ಸಾಬ್(40), ಲಾವಿಗೆರೆ ಗ್ರಾಮದ ಲಂಬೋದರ (25) ಮತ್ತು ಅಭಿಷೇಕ (24) ಹಾಗೂ ದಾವಣೆಗೆರೆಯ ಸಂಜೀವ ಶೇಟ್ (43) ಎಂಬವರನ್ನು ಬಂಧಿಸಿ ಕಾಡು ಪ್ರಾಣಿ ಹತ್ಯೆಯ ಪ್ರಕರಣ ದಾಖಲಿಸಲಾಗಿದೆ. ಮಂಗಗಳ ಶವವನ್ನು ಬಿಸಾಡಲು ಬಳಸಿದ ಒಂದು ಟಾಟಾ ಏಸ್ ವಾಹನ ಮತ್ತು ಆಡಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. 

ಮಂಗಗಳು ಹೊಲ ಮತ್ತು ತೋಟಕ್ಕೆ ದಾಳಿ ಮಾಡಿ ಪದೇ ಪದೇ ಫಸಲು ತಿನ್ನುತ್ತಿದ್ದವು. ಅವುಗಳಿಗೆ ಮತ್ತು ಬರಿಸಿ ಬೇರೆಡೆ ಸಾಗಿಸಲು ಯತ್ನಿಸಿದ್ದೆವು. ಆದರೆ ಅವು ಸಾವನ್ನಪ್ಪಿದವು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ಮರಿ, ತಾಯಿ ಹೀಗೆ ವಿವಿಧ ವಯೋಮಾನದ 36 ಮಂಗಗಳ ಶವ ದೊರೆತಿವೆ.

ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಇಲ್ಲಿನ ಅರಣ್ಯ ಇಲಾಖೆಯ ವಸತಿ ಗೃಹದ ಎದುರು ರಾಷ್ಟ್ರೀಯ ಹೆದ್ದಾರಿ 206ರ ಸ್ವಲ್ಪ ದೂರದಲ್ಲಿ  ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಟ್ಟಿಗೆಯ ಚಿತೆ ನಿರ್ಮಿಸಿ ಮಂಗಗಳ ಶವದ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದರು. ಮಂಗಗಳ ಶವದ ರಾಶಿ ಕಂಡು ಅರಣ್ಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕಂಬನಿ ಮಿಡಿದ ದೃಶ್ಯ ಕಂಡು ಬಂದಿತು.

ಕಾರ್ಯಾಚರಣೆಯಲ್ಲಿ ಸಾಗರದ ಎ.ಸಿ.ಎಫ್ .ಶ್ರೀಧರ್, ರಾಜೇಶ ನಾಯ್ಕ, ಚೋರಡಿ ವಿಭಾಗದ ಆರ್.ಎಫ್.ಓ ಮೋಹನ್, ಅರಣ್ಯಾಧಿಕಾರಿಗಳಾದ ಇಸ್ಮಾಯಿಲ್, ರಾಘವೇಂದ್ರ ತಗ್ಗಿನ್, ಮಂಜುನಾಥ, ಚಂದ್ರಶೇಖರ್, ಎಂ.ಆರ್.ಆಶೋಕ, ಭದ್ರೇಶ, ಶಿವನಗೌಡ ಬಿರಾದಾರ್, ಸಂತೋಷ್ ನಾಯ್ಕ, ಪ್ರದೀಪ್ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News