ಕೋವಿಡ್ ಹೆಚ್ಚುವರಿ ಭತ್ಯೆಗೆ ಒತ್ತಾಯಿಸಿ ಮಿಮ್ಸ್ ಹೊರಗುತ್ತಿಗೆ ನೌಕರರ ಧರಣಿ

Update: 2020-09-30 16:17 GMT

ಮಂಡ್ಯ, ಸೆ.30: ಕೋವಿಡ್ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನಾನ್ ಕ್ಲಿನಿಕಲ್ ಹಾಗೂ ಭದ್ರತಾ ಸಿಬ್ಬಂದಿಗೆ ಕೋವಿಡ್ ಹೆಚ್ಚುವರಿ ಭತ್ತೆ ನೀಡುವಂತೆ ಮಿಮ್ಸ್ ಹೊರಗುತ್ತಿಗೆ ನೌಕರರು ಬುಧವಾರ ಧರಣಿ ನಡೆಸಿದರು.

ಈ ಕುರಿತು ಮಿಮ್ಸ್ ಆಡಳಿತ ಮಂಡಳಿಗೆ ಮಾಡಿಕೊಂಡ ಮನವಿಗಳು ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಬೆಳಗ್ಗಿನಿಂದಲೆ ಕೆಲಸ ಬಹಿಷ್ಕರಿಸಿ ಮುಷ್ಕರಕ್ಕೆ ಮುಂದಾದರು.

ಕಳೆದ ಆರು ತಿಂಗಳಿನಿಂದ ಜೀವಭಯ ಲೆಕ್ಕಿಸದೆ ಹೊರಗುತ್ತಿಗೆ ನೌಕರರು ಕೊರೋನ ಪೀಡಿತರನ್ನು ಉಪಚರಿಸುತ್ತಿದ್ದಾರೆ. ಸರಕಾರ ಫಾರ್ಮಾಸಿಸ್ಟ್, ವೈದ್ಯರು, ಲ್ಯಾಬ್ ಟೆಕ್ನಿಷಿಯನ್ ಗಳಿಗೆ ಮಾತ್ರ ಹೆಚ್ಚುವರಿ ಭತ್ತೆ ಘೋಷಿಸಿ ತಾರತಮ್ಯ ಎಸಗಿದೆ ಎಂದು ಅವರು ಆರೋಪಿಸಿದರು.

ಕೊರೋನ ವಾರ್ಡುಗಳಲ್ಲಿ ಸ್ವಚ್ಚತೆ ನಿರ್ವಹಿಸುವ ಹೊರಗುತ್ತಿಗೆ ನೌಕರರಿಗೆ ಯಾವುದೆ ಭದ್ರತೆಯಿಲ್ಲ. ನೌಕರರು ಸೋಂಕಿಗೊಳಗಾದರೆ ವಾಹನಗಳ ಗ್ಯಾರೇಜುಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಸೋಂಕಿಗೊಳಗಾಗಿ ನೌಕರರು ಮೃತಪಟ್ಟರೆ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಮಿಮ್ಸ್ ಮೆಡಿಕಲ್ ಸೂಪರಿಂಟೆಂಡೆಂಟ್ ನೀಡಿದ ಪ್ರತಿಕ್ರಿಯೆಗೆ ನೌಕರರು ತೀವ್ರ ವಿರೋಧ ತೋರಿದರು.

ಸ್ಥಳಕಾಗಮಿಸಿದ ಮಿಮ್ಸ್ ನಿರ್ದೇಶಕ ಡಾ.ಜಿ.ಎಂ ಪ್ರಕಾಶ್, ಹೊರಗುತ್ತಿಗೆ ನೌಕರರಿಗೂ ತಮಗೂ ಯಾವುದೆ ಸಂಬಂದವಿಲ್ಲ. ಗುತ್ತಿಗೆ ಏಜೆನ್ಸಿಗಳು ಮಾತ್ರವೆ ಹೊಣೆಗಾರಿಕೆ ಹೊರಬೇಕು ಎಂದು ಹೇಳಿದರು.

ಅಂತಿಮವಾಗಿ ಮೆಡಿಕಲ್ ಸೂಪರಿಂಟೆಂಡೆಂಟ್ ಮುಂದಿನ ವೇತನದೊಂದಿಗೆ ಕೋವಿಡ್ ಹೆಚ್ಚುವರಿ ಭತ್ಯೆ ಸೇರಿಸಿ ವೇತನ ಪಾವತಿಸಲಾಗುವುದೆಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ವೆಂಕಟಲಕ್ಷ್ಮೀ, ಖಜಾಂಚಿ ಚಿನ್ನರಾಜು, ಕಾರ್ಯದರ್ಶಿ ಶಿವರಾಮ್, ಯಶೋಧಾ, ಗೌರಮ್ಮ, ಸುಜಾತ, ಜಯಲಕ್ಷ್ಮಿ ವಹಿಸಿದ್ದರು. ಸ್ಥಳದಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಬಂದೋಬಸ್ತ್ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News