ಕಲಬುರಗಿ: ಹುಚ್ಚು ನಾಯಿ ಕಡಿತ; ಐವರಿಗೆ ಗಂಭೀರ ಗಾಯ

Update: 2020-09-30 17:24 GMT

ಕಲಬುರಗಿ, ಸೆ.30: ಹುಚ್ಚು ನಾಯಿಯೊಂದು ಒಂದೇ ದಿನ ಐವರ ಮೇಲೆ ದಾಳಿ ಮಾಡಿದ ಘಟನೆ ಬುಧವಾರ ವಾಡಿ ಪಟ್ಟಣದಲ್ಲಿ ಸಂಭವಿಸಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಬುಧವಾರ ಬೆಳಗ್ಗೆ ಬೀದಿನಾಯಿಯೊಂದು ರೈಲ್ವೆ ಕಾಲನಿ ಬಡಾವಣೆಯಲ್ಲಿ ರೈಲ್ವೆ ಕ್ಯಾಂಟೀನ್ ಮಹಿಳಾ ಸಿಬ್ಬಂದಿ ಕಮಲಾಬಾಯಿ ರೇವಣಸಿದ್ಧ, ಕ್ಯಾಥೋಲಿಕ್ ಚರ್ಚ್ ಬಡಾವಣೆಯ ವೃದ್ಧ ಹಾಗೂ ರೈಲ್ವೆ ಪೊಲೀಸ್ ಠಾಣೆಯ ಓರ್ವ ಪೇದೆ ಸೇರಿದಂತೆ ಸ್ಥಳೀಯವಾಗಿ ಹೀಗೆ ಒಟ್ಟು ಐವರ ಮೇಲೆ ದಾಳಿ ಮಾಡಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಗಾಯಾಳುಗಳಿಗೆ ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಹಾಗೂ ರೈಲ್ವೆ ಠಾಣೆಯ ಪಿಎಸ್ಐ ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ. 

ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿಂದ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಪದೇಪದೆ ನಾಯಿಗಳ ಕಡಿತಕ್ಕೆ ತುತ್ತಾಗುತ್ತಿದ್ದಾರೆ. ನಾಯಿ ಹಿಡಿಯುವ ಕಾರ್ಯ ಮುಂದುವರಿದಿದೆಯಾದರೂ ಜನರ ಮೇಲಿನ ದಾಳಿ ಮಾತ್ರ ಕೊನೆಗೊಂಡಿಲ್ಲ. 

ಹುಚ್ಚುನಾಯಿ ವಶಕ್ಕೆ: ಘಟನೆ ತಿಳಿದು ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಠಾಣೆಯ ಪಿಎಸ್ಐ ವೀರಭದ್ರಪ್ಪ ಅವರು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ಹುಚ್ಚು ನಾಯಿಯನ್ನು ನಿಯಂತ್ರಿಸುವಲ್ಲಿ ನೆರವಾದರು.

ನಾಯಿ ನಿಯಂತ್ರಣ ತಂಡದ ಸಿಬ್ಬಂದಿಗಳು ಹಂದಿ ಹಿಡಿಯುವ ಬಲೆಯಿಂದ ಘಟನೆಗೆ ಕಾರಣವಾದ ಹುಚ್ಚು ನಾಯಿ ಸೇರಿದಂತೆ ಇತರ ಹತ್ತಾರು ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು. ಪಟ್ಟಣದಲ್ಲಿ ಇದುವರೆಗೂ 750ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಸಾಗಿಸಲಾಗಿದ್ದು, ಇನ್ನಷ್ಟು ನಾಯಿಗಳನ್ನು ಹಿಡಿಯುವ ಕಾರ್ಯ ಮುಂದುವರಿಯಲಿದೆ ಎಂದು ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News