ಮೈಸೂರು: ದಲಿತ ಯುವತಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Update: 2020-09-30 18:25 GMT

ಮೈಸೂರು,ಸೆ.30: ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ, ತಪ್ಪಿತಸ್ಥರಿಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಇಂತಹ ಘಟನೆಗಳು ತೋರಿಸುತ್ತವೆ. ಹಲವಾರು ದೊಡ್ಡ ಭಾಷಣಗಳ ಹೊರತಾಗಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅದೇ ಬಿಜೆಪಿ ನೇತೃತ್ವದ ಯುಪಿ ಸರ್ಕಾರ ಮಹಿಳೆಯರ ಹಾಗೂ ಮಕ್ಕಳ ಘನತೆಯನ್ನು ಕಾಪಾಡುವಲ್ಲಿ ಸೋತು ಹೋಗಿದೆ ಎಂದು ಆರೋಪಿಸಿದರು.

ಭಾರತೀಯ ಸಂಸ್ಕೃತಿಯ ಹರಿಕಾರರು ಈ ದೇಶದ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿಯನ್ನು ಹೊಂದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಅಪರಾಧಿಗಳೊಂದಿಗೆ ನಿಂತಿರುವುದು ಅತ್ಯಂತ ನೋವು ತರಿಸುವಂಥದ್ದು. ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟಿನಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆಯನ್ನು ವಿಧಿಸಬೇಕು. ಅಶ್ಲೀಲತೆ, ಡ್ರಗ್ಸ್ ಮತ್ತು ಮದ್ಯವನ್ನು ಕೊನೆಗೊಳಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಂಧ್ಯಾ ಪಿ.ಎಸ್, ಜಿಲ್ಲಾ ಕಾರ್ಯದರ್ಶಿ ಸೀಮಾ, ಜಿಲ್ಲಾಧ್ಯಕ್ಷರಾದ ಹರೀಶ್, ಸುನೀಲ್, ಕಲಾವತಿ, ಆಸಿಯಾಬೇಗಂ, ಚಂದ್ರಕಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News