ಭಾರತದ ಕೋವಿಡ್-19 ಸಾವಿನ ಲೆಕ್ಕ ಸುಳ್ಳು: ಟ್ರಂಪ್

Update: 2020-10-01 04:19 GMT

ವಾಷಿಂಗ್ಟನ್, ಅ.1: ಭಾರತ ಬಿಡುಗಡೆ ಮಾಡಿರುವ ಕೋವಿಡ್-19 ಸಾವಿನ ಲೆಕ್ಕಾಚಾರದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿ ಮೂಡಿಸಿದ್ದಾರೆ. ಭೀಕರ ಸಾಂಕ್ರಾಮಿಕದಿಂದ ಮೃತಪಟ್ಟವರ ನಿಖರ ಸಂಖ್ಯೆಯನ್ನು ನೀಡದ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ  ಬೈಡನ್ ನಡುವಿನ ನೇರ ಮುಖಾಮುಖಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ 70 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲಿ, ಎರಡು ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ಟ್ರಂಪ್ ಆಡಳಿತ ವಿಫಲವಾಗಿದೆ ಎಂದು ಬೈಡನ್ ವಾಗ್ದಾಳಿ ನಡೆಸಿದಾಗ ಟ್ರಂಪ್ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಸರಕಾರದ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡ ಟ್ರಂಪ್, ಸಕಾಲಿಕ ಕ್ರಮಗಳನ್ನು ಕೈಗೊಳ್ಳದಿದ್ದರೆ ಸಾವಿನ ಸಂಖ್ಯೆ ಹತ್ತು ಲಕ್ಷ ದಾಟುತ್ತಿತ್ತು ಎಂದರು.

 "ಸಾವಿನ ಸಂಖ್ಯೆಯ ಬಗ್ಗೆ ಮಾತನಾಡುವಾಗ ಚೀನಾದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ನಿಮಗೆ ಗೊತ್ತಿಲ್ಲ. ರಶ್ಯದಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂಬ ಕಲ್ಪನೆ ಇಲ್ಲ. ಭಾರತದಲ್ಲಿ ಎಷ್ಟು ಮಂದಿ ಬಲಿಯಾಗಿದ್ದಾರೆ ಎನ್ನುವುದು ತಿಳಿದಿಲ್ಲ. ಯಾರೂ ನಿಖರವಾಗಿ ಸರಿಯಾದ ಸಂಖ್ಯೆ ನೀಡಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ" ಎಂದು ಹೇಳಿದರು.

ಕೊರೋನ ವೈರಸ್ ಸಾಂಕ್ರಾಮಿಕ ವಿಶ್ವವ್ಯಾಪಿಯಾಗಿ ಹರಡಲು ಚೀನಾ ನೇರ ಹೊಣೆ ಎಂದು ಪದೇ ಪದೇ ಟ್ರಂಪ್ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News