ರಾಜ್ಯಾದ್ಯಂತ ಅ.3ರವರೆಗೆ ಮಳೆ ಮುಂದವರಿಯುವ ಸಾಧ್ಯತೆ: ಹವಾಮಾನ ಇಲಾಖೆ

Update: 2020-10-01 12:02 GMT

ಬೆಂಗಳೂರು, ಅ.1: ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾದ್ದರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದೆ. ಇದರಿಂದಾಗಿ ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಅ.1ರಿಂದ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಲಿದ್ದು, ಸಾಧಾರಣ ಮಳೆ ಬೀಳಲಿದೆ. ಬುಧವಾರದಂದು ಬೆಂಗಳೂರು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿತ್ತು. ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರದ ಕೆಲವು ಭಾಗಗಳಲ್ಲಿ ಬುಧವಾರ ತುಂತುರು ಮಳೆಯಾಗಿದೆ. ಅಲ್ಲದೇ ಮಲೆನಾಡು, ಕರಾವಳಿಯಲ್ಲಿ ಅ.1ರಿಂದ ಅ.3ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತಡವಾಗಿ ಮಳೆಗಾಲ ಆರಂಭವಾದರೂ ಬೇರೆ ವರ್ಷಗಳಿಗಿಂತ ಹೆಚ್ಚಿನ ಮಳೆ ದಾಖಲಾಗಿದೆ. 4 ತಿಂಗಳ ಮಳೆಗಾಲದಲ್ಲಿ ಸಾಮಾನ್ಯ ಮಾನ್ಸೂನ್‍ಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 30 ವರ್ಷಗಳಲ್ಲಿ ಎರಡನೇ ಅತಿ ಹೆಚ್ಚು ಮಳೆಯಾದ ವರ್ಷ 2020 ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಬಿಹಾರ, ಗುಜರಾತ್, ಮೇಘಾಲಯ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಸಿಕ್ಕಿಂ, ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿ ಸಾಮಾನ್ಯ ಮಳೆಗಿಂತ ಹೆಚ್ಚು ಮಳೆಯಾಗಿದೆ. ಆದರೆ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೆ ವರ್ಷಗಳಿಗಿಂತ ಕಡಿಮೆ ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News