ನ್ಯಾಯಾಂಗ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿ ಕಾಣುತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2020-10-01 12:07 GMT

ಬೆಂಗಳೂರು, ಅ.1: ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದು ನಮಗೆಲ್ಲರಿಗೂ ಬೇಸರ ತರಿಸುವ ವಿಚಾರ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1992ರ ಡಿ.6ರಂದು ನಡೆದ ಘಟನೆಯನ್ನು ಎಲ್ಲರೂ ನೋಡಿದ್ದಾರೆ. ಯಾರು ಮಸೀದಿ ಮೇಲೆ ಹತ್ತಿದ್ದರು, ಯಾರು ಕೂತಿದ್ದರು ಎಲ್ಲವೂ ಗೊತ್ತಿದೆ. ನಮ್ಮ ದೇಶದ ಪತ್ರಿಕೆಗಳು ಸೇರಿದಂತೆ, ವಿಶ್ವದ ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ರೂಪದ ವರದಿಯಾಗಿದೆ. ವಿಶೇಷ ಸಾಕ್ಷಿ ಇಲ್ಲ ಅಂತ ಸಿಬಿಐ ಕೋರ್ಟ್ ಖುಲಾಸೆ ಮಾಡಿದೆ. ಇದು ನಮ್ಮೆಲ್ಲರಿಗೆ ಬೇಸರ ತರುವ ಸಂಗತಿ ಎಂದರು.

ನ್ಯಾಯಾಂಗ ಕೂಡ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿ ಕಾಣುತ್ತಿಲ್ಲ. ನ್ಯಾಯಾಂಗದ ಮೇಲಿನ ವಿಶ್ವಾಸ ಜನರಿಗೆ ಹೋಗುತ್ತದೆ. ಕಾರ್ಯಾಂಗ, ನ್ಯಾಯಾಂಗ ಎರಡೂ ಬೇರೆ ಬೇರೆ. ಬಡ ಜನರಿಗೆ ಸಿಗುವ ತೀರ್ಪು, ಶಿಕ್ಷೆ ಮೊಟಕಾಗಿದೆ. ಇದರಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳಿದರು.

ಅಡ್ವಾಣಿಯವರು ರಾಮರಥ ಪ್ರಾರಂಭಿಸಿದರು. ಅಲ್ಲಿಂದಲೇ ಎಲ್ಲ ನಡೆದಿದೆ. ಬಿಜೆಪಿಯವರೇ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಹೋಗಲಿ ಕರಸೇವಕರು ಎಲ್ಲಿಂದ ಬಂದರು? ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು? ಕರಸೇವಕರು ಅಲ್ಲಿ ಏಕಾಏಕಿ ಹೋಗೋಕೆ ಸಾಧ್ಯವೇ? ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ? ಹಾಗಾದರೆ ಬಾಬರಿ ಮಸೀದಿ ಹೊಡೆದಿದ್ದು ಯಾರು? ಬಾಬರಿ ಮಸೀದಿ ಬಳಿ ಕರಸೇವಕರನ್ನ ಕರೆದೊಯ್ದಿದ್ದು ಹೇಗೆ? ಎಂದು ಅವರು ಪ್ರಶ್ನಿಸಿದರು.

ಕಲ್ಯಾಣ್ ಸಿಂಗ್ ಆಗ ಸಿಎಂ ಆಗಿದ್ದರು. ಕರಸೇವಕರು ಗಲಾಟೆ ಮಾಡುತ್ತಾರೆ ಎಂದು ಒಬ್ಬ ಮುಖ್ಯಮಂತ್ರಿಯೇ ಹೀಗೆ ಹೇಳಿದರೆ ಹೇಗೆ? ಇದಕ್ಕಾಗಿಯೇ ಕರಸೇವಕರು ಅಲ್ಲಿಗೆ ಹೋಗೋಕೆ ಸಾಧ್ಯವಾಯಿತು. ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಹೈಕೋರ್ಟ್ ಗೆ ಹೋಗುತ್ತಾರೆ. ಈ ಹಿಂದೆ ಯಾರು ಕೊಟ್ಟಿದ್ದರು ಅವರೇ ಹೈಕೋರ್ಟ್ ಗೆ ಹೋಗುತ್ತಾರೆ. ತೀರ್ಪಿನ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತಾರೆ. ಕಣ್ಣೆದುರೇ ಕಂಡ ದೃಶ್ಯಗಳನ್ನ ಸಾಕ್ಷ್ಯಗಳಾಗಿ ಪರಿಗಣಿಸಿಲ್ಲ. ಮುಂದೆ ಕೋರ್ಟ್ ತೀರ್ಪುಗಳು ಹೇಗೆ ಬರುತ್ತವೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸಿಎಂ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹ

ಉತ್ತರ ಪ್ರದೇಶದಲ್ಲಿ ದಲಿತ ಕಾಲೇಜು ಯುವತಿಯನ್ನ ಅತ್ಯಾಚಾರ ಮಾಡಿ ನಾಲಿಗೆ ಕತ್ತರಿಸಿದ್ದಾರೆ. ಮಾತನಾಡಬಾರದು ಎಂದು ನಾಲಿಗೆ ಕತ್ತರಿಸಬಹುದು. ಪ್ರಧಾನಿ ಮೋದಿ ಬಂದ ನಂತರ ಇಂತಹ ಘಟನೆ ನಡೆಯುತ್ತಿವೆ. ಮೇಲ್ವರ್ಗದವರಾದರೆ ಕ್ರಮವನ್ನೇ ತೆಗೆದುಕೊಳ್ಳಲ್ಲ. ದೆಹಲಿಯಲ್ಲಿ ನಿರ್ಭಯಾ ಕೇಸ್‍ನಲ್ಲಿ ಏನಾಯ್ತು? ಎಲ್ಲರೂ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸಿದರು. ಆಗ ಇದ್ದವರು ಈಗ ಯಾಕೆ ಬಾಯಿ ಬಿಡುತ್ತಿಲ್ಲ. ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲೇ ಇದು ಹೆಚ್ಚಾಗುತ್ತಿದೆ. ಆದಿತ್ಯನಾಥ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News