ರಾಹುಲ್, ಪ್ರಿಯಾಂಕಾ ಜೊತೆ ಪೊಲೀಸರ ದುರ್ವರ್ತನೆಗೆ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ: ಸಿದ್ದರಾಮಯ್ಯ

Update: 2020-10-01 13:19 GMT

ಬೆಂಗಳೂರು, ಅ.1: ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣುಮಗಳ ಮೇಲೆ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರವಾಗಿ, ಆಕೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರಾದ ರಾಹುಲ್‍ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೇಲೆ ಅಲ್ಲಿನ ಬಿಜೆಪಿ ಸರಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ವಿಡಿಯೋ ಸಂದೇಶ ರವಾನಿಸಿರುವ ಅವರು, ರಾಹುಲ್ ಗಾಂಧಿ ಮೇಲೆ ಪೊಲೀಸರು ಹಲ್ಲೆ ಮಾಡಿರುವುದು ತೀವ್ರ ಖಂಡನೀಯ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಿಗೆ ಈ ಗೂಂಡಾ ರಾಜ್ಯ ಉತ್ತರ ಪ್ರದೇಶದಲ್ಲಿ ರಕ್ಷಣೆ ಇಲ್ಲದೆ ಹೋದರೆ, ಇನ್ನು ಸಾಮಾನ್ಯ ಜನರಿಗೆ, ದಲಿತರು, ಮಹಿಳೆಯರು, ರೈತರು, ಕಾರ್ಮಿಕರು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಯೋಗಿ ಆದಿತ್ಯನಾಥ್ ಸರಕಾರ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಅವರು ಕಿಡಿಗಾರಿದ್ದಾರೆ.

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿರುವುದು ಖಂಡನೀಯ. ಈ ಇಬ್ಬರು ನಾಯಕರ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ. ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರಕಾರದ ಬಣ್ಣ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಆ ಕುಟುಂಬದ ಭೇಟಿಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಟಿ ಬಚಾವೋ ಬಗ್ಗೆ ಪ್ರಧಾನಿ ಮೌನವೇಕೆ?: ಹತ್ರಾಸ್ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ನಮ್ಮ ನಾಯಕ ರಾಹುಲ್ ಗಾಂಧಿ ಮೇಲೆ ಉತ್ತರ ಪ್ರದೇಶದ ಪೊಲೀಸರು ದೌರ್ಜನ್ಯವೆಸಗಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಯಾವ ಕಾನೂನು ಅಡಿಯಲ್ಲಿ ರಾಹುಲ್ ಗಾಂಧಿಯನ್ನು ತಡೆಯಲಾಗಿದೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ? ಪ್ರಧಾನಿ ಯಾಕೆ ಈಗ ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

''ಯೋಗಿ ಆದಿತ್ಯನಾಥ್ ನಿಮ್ಮ ರಾಜ್ಯ ಸ್ತ್ರೀ ವಿರೋಧಿಗಳ ಸಾಮ್ರಾಜ್ಯವಾಗಿದೆ. ದಲಿತ ಯುವತಿಯನ್ನು ಭೀಭತ್ಸವಾಗಿ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗದೆ, ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಮೇಲೆ ಪೊಲೀಸರ ಮೂಲಕ ಬಲಪ್ರಯೋಗ ಮಾಡಿಸಿದ್ದು ಖಂಡನೀಯ'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಖಾವಿಧಾರಿಗಳಿಗೆ ಕಳಂಕ: ಹತ್ರಾಸ್‍ನ ಭೀಕರ ಘಟನೆಯ ಬೆನ್ನಲ್ಲೆ ಉತ್ತರ ಪ್ರದೇಶದ ಬಲರಾಂಪುರದಲ್ಲಿ ಮತ್ತೊಬ್ಬ ದಲಿತ ಯುವತಿಯ ಅತ್ಯಾಚಾರ, ಕೊಲೆ ಮುಂದುವರಿದಿದೆ. ಉನ್ನಾವೋ, ಕತುವಾ, ಹತ್ರಾಸ್, ಬಲರಾಂಪುರ. ಸ್ತ್ರೀಯ ರಕ್ಷಣೆಯ ಬದಲಿಗೆ ಸರಕಾರಿ ಪ್ರಾಯೋಜಿತ ಸಾಕ್ಷ್ಯನಾಶ ನಡೆಯುತ್ತಿದೆ. ಯೋಗಿ ಆದಿತ್ಯನಾಥ್ ಖಾವಿಧಾರಿಗಳಿಗೆ ಕಳಂಕವಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News