ಇಂಗು ಗುಂಡಿಗೆ ಬಿದ್ದು ಮೃತಪಟ್ಟ ಬಾಲಕಿಯ ಕುಟುಂಬಕ್ಕೆ 1.5 ಲಕ್ಷ ರೂ. ಪರಿಹಾರ ವಿತರಣೆ

Update: 2020-10-01 13:53 GMT

ಹುಬ್ಬಳ್ಳಿ, ಅ.1: ಹುಬ್ಬಳ್ಳಿ ನಗರದ ಇಂದಿರಾ ಗಾಜಿನಮನೆ ಉದ್ಯಾನದಲ್ಲಿರುವ ಮಳೆ ನೀರು ಇಂಗು ಗುಂಡಿಗೆ ಇತ್ತೀಚೆಗೆ ಬಿದ್ದು ಸಾವನ್ನಪ್ಪಿದ ಬಾಲಕಿ ಕುಟುಂಬಕ್ಕೆ ಸ್ಮಾರ್ಟ್ ಸಿಟಿ ವತಿಯಿಂದ ಗುರುವಾರ 1.5 ಲಕ್ಷ ಪರಿಹಾರ ನೀಡಲಾಗಿದೆ.

ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ನೀಡಬೇಕೆಂದು ಒತ್ತಾಯಿಸಿ ನಗರದ ಐಟಿ ಪಾರ್ಕ್ ಸಂಕೀರ್ಣದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿ ಎದುರು ಸಮತಾ ಸೇನಾ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅವರು, ಸ್ಥಳದಲ್ಲೇ ಕುಟುಂಬದ ಸದಸ್ಯರಿಗೆ 1.5 ಲಕ್ಷ ರೂ. ಪರಿಹಾರ ಮೊತ್ತದ ಚೆಕ್ ನೀಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಾಲಕಿ ತ್ರಿಶಾ ಯರಂಗಳಿ ಸಾವನ್ನಪ್ಪಿದ್ದಾಳೆ. ಇಂಗು ಗುಂಡಿಯ ಸುತ್ತ ಬೇಲಿ ಅಥವಾ ತಡೆಗೋಡೆ ನಿರ್ಮಿಸದೆ ಕಡೆಗಣಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ. ಹೀಗಾಗಿ, ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿ ಶಕೀಲ್ ಅಹ್ಮದ್ ಅವರು, ಮತ್ತಷ್ಟು ಪರಿಹಾರ ನೀಡುವ ಕುರಿತು, ವಾರದೊಳಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News