ಕೋವಿಡ್ ನಿಯಮ ಅನುಸರಿಸದ ಹೊಟೇಲ್‍ಗಳ ಪರವಾನಿಗೆ ರದ್ದು: ಪೌರಾಯುಕ್ತ ಬಸವರಾಜ್

Update: 2020-10-01 14:01 GMT

ಚಿಕ್ಕಮಗಳೂರು, ಅ.1: ಕೊರೋನ ನಿಯಂತ್ರಣಕ್ಕಾಗಿ ಸರಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ನಗರದಲ್ಲಿ ಮಾಸ್ಕ್ ಧರಿಸದವರಿಗೆ ಸದ್ಯ 100 ರೂ. ದಂಡ ವಸೂಲಿ ಮಾಡಲಾಗುತ್ತಿದ್ದು, ಸರಕಾರದ ಆದೇಶ ಬಂದಲ್ಲಿ ಈ ದಂಡದ ಪ್ರಮಾಣವನ್ನು 1 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಕೋವಿಡ್ ನಿಯಮ ಅನುಸರಿಸದ ಹೊಟೇಲ್‍ಗಳ ಪರವಾನಿಗೆಯನ್ನು ರದ್ದುಗೊಳಿಸಿ ಬಾಗಿಲು ಮುಚ್ಚಿಸಲಾಗುವುದು ಎಂದು ನಗರಸಭೆ ಆಯುಕ್ತ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಗರಸಭೆ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನಗರದಲ್ಲಿ ಮಾಸ್ಕ್ ಧರಿಸದೇ ಕೋವಿಡ್ ನಿಯಮ ಉಲ್ಲಂಘಿಸುವ ಪ್ರತೀ ವ್ಯಕ್ತಿಗೆ 100 ರೂ. ದಂಢ ವಿಧಿಸಲಾಗುತ್ತಿದೆ. ಇದುವರೆಗೆ ಮಾಸ್ಕ್ ಧರಿಸದಿರುವವರಿಂದ ನಗರಸಭೆ ಸಿಬ್ಬಂದಿ 1.47 ಲಕ್ಷ ರೂ. ದಂಡವನ್ನು ಸಂಗ್ರಹಿಸಿದ್ದಾರೆ. ದಂಡ ಸಂಗ್ರಹಿಸುವ ಈ ಕಾರ್ಯಕ್ಕಾಗಿ 5 ತಂಡಗಳನ್ನು ರಚಿಸಲಾಗಿದೆ. ಪ್ರತೀ ತಂಡದಲ್ಲಿ 8-10 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರ ನಗರದ ಕತ್ರಿಮಾರಮ್ಮ ದೇವಾಲಯ, ಬೋಳರಾಮೇಶ್ವರ ಸಮೀಪದ ರಸ್ತೆ, ಉಪ್ಪಳ್ಳಿ ರಸ್ತೆ, ರತ್ನಗಿರಿ ರಸ್ತೆ, ಎಂ.ಜಿ.ರಸ್ತೆಗಳಲ್ಲಿ ಕಾರ್ಯಚರಣೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಢ ವಿಧಿಸಲಾಯಿತು ಎಂದು ಮಾಹಿತಿ ನೀಡಿದರು.

ಪ್ರತಿದಿನ ಮಾಸ್ಕ್ ಧರಿಸದ ಕನಿಷ್ಠ 100 ಜನರು ನಗರದಲ್ಲಿ ಪತ್ತೆಯಾಗುತ್ತಿದ್ದಾರೆ. ಅವರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಪ್ರತಿದಿನ 7ರಿಂದ 10 ಸಾವಿರ ರೂ. ದಂಡ ವಸೂಲಾಗುತ್ತಿದೆ. ಸರಕಾರದಿಂದ ಆದೇಶ ಬಂದರೆ ನಾಳೆಯಿಂದ ಮಾಸ್ಕ್ ಧರಿಸದ ಪ್ರತೀ ವ್ಯಕ್ತಿಗೆ 1 ಸಾವಿರ ರೂ. ದಂಡವಿಧಿಸಲಾಗುವುದು. ಕೊರೋನ ಸೋಂಕು ಪತ್ತೆಯಾದ ಆರಂಭದಲ್ಲಿ ನಗರದಲ್ಲಿ ಪ್ರತೀ ವಾರ್ಡಿನ ಎಲ್ಲ ಮನೆಗಳಿಗೆ ನಗರಸಭೆ ವತಿಯಿಂದ ಉಚಿತ ಮಾಸ್ಕ್ ವಿತರಿಸಲಾಗಿದೆ. ಸರಕಾರ ವಿಶೇಷ ಅನುದಾನ ನೀಡಿದರೆ ಮತ್ತೆ ಉಚಿತ ಮಾಸ್ಕ್ ಗಳನ್ನು ವಿತರಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಲಿದೆ ಎಂದರು. 

ಕೋವಿಡ್-19 ಬಗ್ಗೆ ಎಚ್ಚರಿಕೆ ವಹಿಸುವಂತೆ ನಗರಸಭೆ ವತಿಯಿಂದ ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ತಿಳುವಳಿಕೆ ನೀಡಲಾಗುತ್ತಿದೆ. ಕಸಸಂಗ್ರಹಣೆ ವೇಳೆ 24 ಆಟೊಗಳಲ್ಲಿ ಪ್ರತಿದಿನ ಪ್ರಚಾರಕಾರ್ಯ ನಡೆಸಲಾಗುತ್ತಿದೆ. ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಮತ್ತು ವಾರದ ಸಂತೆಗಳಲ್ಲೂ ಜನರಿಗೆ ತಿಳುವಳಿಕೆ ಮೂಡಿಸುವುದರೊಂದಿಗೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಆಯುಕ್ತ ಬಸವರಾಜ್ ತಿಳಿಸಿದರು.

ಶುಚಿತ್ವ ಕಾಪಾಡದ ಹೊಟೇಲ್‍ಗಳ ಪರವಾನಿಗೆ ರದ್ದು:

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಶುಚಿತ್ವ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವಂತೆ 2 ಬಾರಿ ಹೊಟೇಲ್ ಮಾಲಕರ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಹೊಟೇಲ್ ಸಿಬ್ಬಂದಿ ಮಾಸ್ಕ್ ಧರಿಸಬೇಕು. ಕೈಗವಚ ಹಾಕಿರಬೇಕು. ಕಾಲಿಗೆ ಶೂಗಳನ್ನೂ ತೊಟ್ಟಿರಬೇಕು. ಉಪಯೋಗಿಸಿ ಬಿಸಾಡುವ ತಟ್ಟೆಗಳನ್ನು ಬಳಸಬೇಕು. ಒಂದು ವೇಳೆ ಸಾಮಾನ್ಯ ತಟ್ಟೆಗಳನ್ನು ನೀಡಿದರೆ ಅವುಗಳನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸಬೇಕೆಂದು ತಿಳಿಸಲಾಗಿದೆ. ಈ ಸೂಚನೆಗಳನ್ನು ಪಾಲಿಸದ ಹೊಟೇಲ್‍ಗಳ ಬಾಗಿಲು ಮುಚ್ಚಿಸಿ, ಪರವಾನಿಗೆಯನ್ನು ರದ್ದುಪಡಿಸಲಾಗುವುದು. ಮುಂದಿನ ಸೋಮವಾರದಿಂದ ನಗರದಲ್ಲಿ ಈ ಸಂಬಂಧ ಕಾರ್ಯಾಚರಣೆಗಿಳಿಯಲಾಗುವುದು ಎಂದರು ಇದೇ ವೇಳೆ ಕಮೀಶನರ್ ಬಸವರಾಜ್ ಎಚ್ಚರಿಕೆ ನೀಡಿದರು.

ಬಸವನಹಳ್ಳಿಕೆರೆ ಮೇಲ್ಭಾಗ ಹಂದಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಂಡಿದ್ದು, 50-60 ಹಂದಿಗಳನ್ನು ಸಾಕಾಣಿಕೆ ಮಾಡಲಾಗುತಿತ್ತು. ಅದನ್ನು ಪತ್ತೆಹಚ್ಚಿ ಶೆಡ್ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಹಂದಿಗಳನ್ನು ಮೇಯಿಸಬಾರದೆಂದು ಎಚ್ಚರಿಕೆ ನೀಡಲಾಗಿದೆ. ಎಚ್ಚರಿಕೆ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕೆರೆಯ ಸುತ್ತ ವಾಕಿಂಗ್‍ ಪಾತ್ ನಿರ್ಮಿಸಿದ್ದು, ಅಲ್ಲಿ ಕಳೆ ಬೆಳೆದುಕೊಂಡಿದೆ. ಒಂದು ವಾರಗಳ ಕಾಲ ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಲಾಗುವುದು. ಕೆರೆಯ ಏರಿ ಸುತ್ತಲ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಅದಕ್ಕೆ ಕಡಿವಾಣಹಾಕಲಾಗುವುದು ಎಂದು ಇದೇ ವೇಳೆ ಆಯುಕ್ತ ಬಸವರಾಜ್ ತಿಳಿಸಿದರು. 

ಗಾಂಧಿ ಜಯಂತಿ ಅಂಗವಾಗಿ ಕುಡಿಯುವ ನೀರು ಸರಬರಾಜು ಮಾಡುವ ಹಳೇ ಪದ್ಧತಿಗೆ ಬದಲಾಗಿ ದಿನದ 24 ಗಂಟೆಗಳ ಕಾಲ ನಗರದ ಮೂರು ವಾರ್ಡ್ ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ನಗರದ ಗೃಹಮಂಡಳಿ ಬಡಾವಣೆ, ಹಿರೇಮಗಳೂರು ಮತ್ತು ಉಪ್ಪಳ್ಳಿ ಬಡಾವಣೆಯಲ್ಲಿ ಅಮೃತ್ ಯೋಜನೆಯಡಿ ಹೊಸ ಪದ್ಧತಿಯಲ್ಲಿ ನೀರು ನೀಡಲಾಗುತ್ತಿದೆ. ಪೈಪ್‍ನಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ಸರಿಪಡಿಸಲು ಮೂರು ತಂಡಗಳು ಕಾರ್ಯನಿರ್ವಹಿಸಲಿವೆ. ಮುಂದಿನ 5 ದಿನದೊಳಗೆ ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
- ಬಸವರಾಜ್, ಪೌರಾಯುಕ್ತ

ನಗರದ ಆಶ್ರಯ ಬಡಾವಣೆಯಲ್ಲಿ ಬಲಾಢ್ಯರು ಬೇರೆಯವರ ಹೆಸರಿನಲ್ಲಿರುವ ನಿವೇಶನದಲ್ಲಿ 8-10 ಮನೆಗಳನ್ನು ನಿರ್ಮಿಸಿಕೊಂಡಿದ್ದು, ಬಡವರಿಗೆ ಹಂಚಿಕೆ ಮಾಡಿದ್ದ ನಿವೇಶನದಲ್ಲಿ ಉಳ್ಳವರು, ಪ್ರಭಾವಿಗಳು ಕೆಲವರ ಚಿತಾವಣೆಯಿಂದ ರಸ್ತೆಯನ್ನು ಒತ್ತುವರಿಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದರು. ಗುರುವಾರ ಬೆಳಗ್ಗೆ ಹಕ್ಕುಪತ್ರವನ್ನು ಪರಿಶೀಲಿಸಿ, ತೆರವು ಪ್ರಕ್ರಿಯೆ ಆರಂಭಿಸಲಾಗಿದೆ. ಮೂರು ದಿನದೊಳಗೆ ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಸೂಚನೆ ನೀಡಲಾಗಿದೆ.
- ಬಸವರಾಜ್, ಪೌರಾಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News