ಮೈಸೂರು: ದಲಿತ ಯುವತಿಯ ಅತ್ಯಾಚಾರ, ಕೊಲೆ ಖಂಡಿಸಿ ದಸಂಸ ಪ್ರತಿಭಟನೆ

Update: 2020-10-01 14:44 GMT

ಮೈಸೂರು,ಅ.1: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಬೋಲ್ಗರಿ ಗ್ರಾಮದ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಮತ್ತು ಅದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು.

ನಗರದ ಪುರಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಗುರುವಾರ ಧರಣಿ ನಡೆಸಿದ ದಸಂಸ ಕಾರ್ಯಕರ್ತರು ಸಿಎಂ ಆದಿತ್ಯನಾಥ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಧರ್ಮ, ದೇವರು, ರಾಮಮಂದಿರ, ಹಿಂಧುತ್ವ, ಬೇಟಿ ಬಚಾವ್ ಅನ್ನುವ ಭಾವನಾತ್ಮಕ ವಿಚಾರಗಳನ್ನು ಜೋರು ಧ್ವನಿಯಲ್ಲಿ ಆರ್ಭಟಿಸುತ್ತಾ ಕೇಂದ್ರದಲ್ಲಿ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಂತ ಅದರಲ್ಲೂ ಉತ್ತರ ಪ್ರದೇಶದಲ್ಲಿ ದಲಿತ, ಅಲ್ಪಸಂಖ್ಯಾತ, ಆದಿವಾಸಿ, ಹಿಂದುಳಿದ ವರ್ಗದ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆ, ಸುಲಿಗೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು. 

ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಹೆಣ್ಣು ಮಗಳ ಮೇಲೆ ಅದೇ ಗ್ರಾಮದ ಠಾಕೂರ್ ಸಮುದಾಯಕ್ಕೆ ಸೇರಿದ ನಾಲ್ವರು ಕ್ರೂರಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವುದಲ್ಲದೆ ಆಕೆಯ ಕತ್ತು, ಕೈಕಾಲು, ಬೆನ್ನು ಮೂಳೆಗಳನ್ನು ಮುರಿದು ನಾಲಿಗೆ ಕತ್ತರಿಸಿ ಅಮಾನುಷವಾಗಿ ನಡೆದುಕೊಂಡಿರುವ ಪೈಶಾಚಿಕ ಕೃತ್ಯ ಅತ್ಯಂತ ಖಂಡನೀಯ ಎಂದು ಹೇಳಿದರು.

ಹಿಂದೆ ನಿರ್ಭಯಾ ಪ್ರಕರಣ, ಪ್ರಿಯಾಂಕ ರೆಡ್ಡಿ ಪ್ರಕರಣಗಳಲ್ಲಿ ಸರ್ಕಾರ ತೋರಿದ ಉತ್ಸಾಹ ಮತ್ತು ಕಾಳಜಿಯನ್ನು ದಲಿತ ಯುವತಿಯ ಪ್ರಕರಣದಲ್ಲಿ ತೋರಿಸುತ್ತಿಲ್ಲ, ಮೇಲ್ಜಾತಿಯ ಹೆಣ್ಣೆನ ಮೇಲೆ ಅತ್ಯಾಚಾರವಾದರೆ ಮಾತ್ರ ಖಂಡಿಸುವ ಕೋಮುವಾದಿಗಳು ದಲಿತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರವನ್ನು ಏಕೆ ಖಂಡಿಸುವುದಿಲ್ಲ, ದಲಿತರಿಗೊಂದು ಮತ್ತು ಮೇಲ್ಜಾತಿಯವರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ನಿಧನದ ನಂತರ ಪೊಲೀಸರು ಆಕೆ ತಂದೆ ಮತ್ತು ಸೋದರನಿಗೆ ವಿಷಯ ತಿಳಿಸದೆ ಪೊಲೀಸರೆ ಮಧ್ಯರಾತ್ರಿಯಲ್ಲಿ ಶವವನ್ನು ತೆಗೆದುಕೊಂಡು ಹೋಗಿದ್ದಲ್ಲದೆ ಶವಸಂಸ್ಕಾರದ ವಿಧಿ ವಿಧಾನಗಳನ್ನು ಅನುಸರಿಸದೆ ಸಾಕ್ಷ್ಯ ನಾಶಪಡಿಸುವ ಸಲುವಾಗಿ ಶವವನ್ನು ಸುಟ್ಟಿರುವುದು ಮತ್ತು ಅಲ್ಲಿನ ಐಜಿಪಿ ಅತ್ಯಾಚಾರ ನಡೆದಿಲ್ಲ ಎಂದು ಹೇಳಿಕೆ ನೀಡಿರುವುದು ಆಘಾತಕಾರಿ. ಇದು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅತ್ಯಾಚಾರಿಗಳನ್ನು ಶಿಕ್ಷೆಯಿಂದ ತಪ್ಪಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು. 

ಶೀಘ್ರವಾಗಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಅವರ ಕುಟುಂಬದವರಿಗೆ ನೀಡಿರುವ ಎಲ್ಲಾ ರೀತಿಯ ನಾಗರೀಕ ಹಕ್ಕುಗಳನ್ನು ಹಿಂಪಡೆದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅತ್ಯಾಚಾರಿಗಳನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಿರ್ಭಯಾಳ ಪ್ರಕರಣದಂತೆ ಈ ಯುವತಿಯ ಕುಟುಂಬಕ್ಕೂ ಐದು ಕೋಟಿ ರೂ. ಪರಿಹಾರ ನೀಡಬೇಕು. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ತಕ್ಷಣವೇ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು. ಆಡಳಿತಾತ್ಮಕವಾಗಿ ವಿಫಲವಾಗಿರುವ ಉತ್ತರ ಪ್ರದೇಶ ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಸಾಹಿತಿ ಬನ್ನೂರು ಕೆ.ರಾಜು, ಕಿರಂಗೂರು ಸ್ವಾಮಿ, ಎಸ್ಡಿಪಿಐ ಮುಖಂಡ ಅಮ್ಜದ್ ಖಾನ್, ಕಲ್ಲಹಳ್ಳಿ ಮೂರ್ತಿ, ದೇವರಾಜ್ ಬಿಳಿಕೆರೆ, ವರುಣ ಮಹೇಶ್, ರಂಗಸಮುದ್ರ ಆನಂದ್, ಶಿವಮೂರ್ತಿ ಶಂಕರಪುರ, ಸೋಮನಾಯ್ಕ, ಬೊಮ್ಮೇನಹಳ್ಳಿ ಪಿ.ಮಹದೇವ್, ಶಿವರಾಜ್ ಆಲತ್ತೂರು, ಬೊಮ್ಮೇನ ಹಳ್ಳಿ ಶಂಕರ್, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News