ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿರುದ್ಧದ ಎಲ್ಲ ಪ್ರಕರಣಗಳನ್ನು ಖುಲಾಸೆಗೊಳಿಸಿದ ಕೋರ್ಟ್

Update: 2020-10-01 15:40 GMT

ಬೆಂಗಳೂರು/ರಾಯಚೂರು, ಅ. 1: ನಕ್ಸಲ್ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿ 70ಕ್ಕೂ ಹೆಚ್ಚು ದಿನಗಳ ಕಾಲ ಕಾರಾಗೃಹದಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ರಾಯಚೂರು ಜಿಲ್ಲಾ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿ, `ವಿನೋದ್' ಎಂಬ ಹೆಸರಿನಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಆರೋಪಿಸಿ ರಾಯಚೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಎಲ್ಲ ಪ್ರಕರಣಗಳು 25 ವರ್ಷಗಳ ಹಿಂದೆ ನಡೆದಿದ್ದವು. ಅವುಗಳನ್ನು ಆಧರಿಸಿ ನರಸಿಂಹಮೂರ್ತಿ ಅವರನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು.

ಕಲಂ 143, 147, 148, 307, 355, 385, 120(ಬಿ) 124(ಎ) ಸೇರಿದಂತೆ ಹಲವು ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿದ್ದು, 25 ವರ್ಷಗಳಿಂದ ಇವರು ತಲೆ ಮರೆಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. 2019ರ ಅಕ್ಟೋಬರ್ 24ರಂದು ರಾಯಚೂರಿನಲ್ಲಿ ನಡೆದ ಗೌರಿ ಲಂಕೇಶ್ ಬಳಗದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ನಂತರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ಬಿಡುಗಡೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇದೀಗ ಕೋರ್ಟ್ ವಿಚಾರಣೆಯಲ್ಲಿ ನರಸಿಂಹಮೂರ್ತಿ ಅವರ ವಿರುದ್ಧ ಯಾವುದೇ ಸಾಕ್ಷ್ಯಧಾರ ಇಲ್ಲದ ಕಾರಣ ಅವರನ್ನು `ವಿನೋದ್' ಎಂದು ಅಭಿಪ್ರಾಯಪಡುವುದು ಸರಿಯಲ್ಲ ಎಂದು ಹೇಳಿದೆ. ಅಲ್ಲದೆ, ನರಸಿಂಹಮೂರ್ತಿ ಅವರನ್ನು ದೋಷಮುಕ್ತಗೊಳಿಸಿರುವ ನ್ಯಾಯಾಲಯ ಅವರ ಮೇಲಿದ್ದ ಎಲ್ಲ ಪ್ರಕರಣಗಳನ್ನು ಖುಲಾಸೆಗೊಳಿಸಿದೆ.

ಸತ್ಯಕ್ಕೆ ಸಿಕ್ಕ ಗೆಲುವು: `ಸತ್ಯ ಮತ್ತು ನ್ಯಾಯಕ್ಕೆ ಜಯ ಸಿಗುತ್ತದೆ ಎಂಬುದು ಇಂದು ಬಂದ ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ. ಸಂದಿಗ್ಧ ಮತ್ತು ಕಗ್ಗತ್ತಲ ಕಾಲದಲ್ಲಿ ಜನಪರ ಹೋರಾಟಗಾರರನ್ನು ಕಪೋಲಕಲ್ಪಿತ ಪ್ರಕರಣಗಳಲ್ಲಿ ಸಿಲುಕಿಸಿದ್ದ ಕುತಂತ್ರವನ್ನು ಕೋರ್ಟ್ ಅದರ ವಾಸ್ತವತೆ ಅರಿತು ನನ್ನನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದೆ. ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುವೆ. ಗೌರಿ ಮಿಡಿಯಾ ಟ್ರಸ್ಟ್ ನ ಕಾರ್ಯ ಚಟುವಟಿಕೆಗಳನ್ನು ಮತ್ತು ಶೋಷಿತರ ಪರವಾಗಿ ನನ್ನ ಹೋರಾಟವನ್ನು ದೃಢವಾಗಿ ಮುಂದುವರಿಸುತ್ತೇನೆ' ಎಂದು ದೊಡ್ಡಿಪಾಳ್ಯ ನರಸಿಂಹಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News