ಭಾಗಮಂಡಲದಲ್ಲಿ ಕಡವೆ ಬೇಟೆ: ನಾಲ್ವರು ಆರೋಪಿಗಳ ಬಂಧನ

Update: 2020-10-01 15:35 GMT

ಮಡಿಕೇರಿ, ಅ.1: ಭಾಗಮಂಡಲ ಅರಣ್ಯ ವಲಯದಲ್ಲಿ ಗಂಡು ಕಡವೆಯನ್ನು ಬೇಟೆಯಾಡಿ ಕೊಂದು ಅದನ್ನು ಮಾಂಸ ಮಾಡಿದ ಆರೋಪದಡಿ ನಾಲ್ವರನ್ನು ಬಂಧಿಸುವಲ್ಲಿ ಸಂಪಾಜೆ ಮತ್ತು ಭಾಗಮಂಡಲ ವಲಯ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಭಾಗಮಂಡಲ ತಾವೂರು ಗ್ರಾಮದ ಕಟ್ಟಪಳ್ಳ ಎಂಬಲ್ಲಿ 8 ವರ್ಷದ ಗಂಡು ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿರುವ ಬಗ್ಗೆ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಕಟ್ಟಪಳ್ಳದ ಕೆಲವು ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭ ಅನಿಲ್ ಎಂಬಾತನ ಮನೆಯಿಂದ 5 ಕೆ.ಜಿ ಕಡವೆ ಮಾಂಸ, ಸತೀಶ್ ಎಂಬಾತನ ಮನೆಯಿಂದ 3 ಕೆ.ಜಿ ಬೇಯಿಸಿದ ಹಾಗೂ ಒಣಗಿಸಲು ಇಟ್ಟಿದ್ದ ಮಾಂಸ ಪತ್ತೆಯಾಗಿದೆ. ಮತ್ತಷ್ಟು ತನಿಖೆ ನಡೆಸಿದ ಸಂದರ್ಭ ಇದೇ ಗ್ರಾಮದ ಬಾಲಕೃಷ್ಣ ಮತ್ತು ರಾಘವೇಂದ್ರ ಎಂಬವರೂ ಕೂಡ ಕಡವೆ ಮಾಂಸ ಸೇವಿಸಿರುವುದಾಗಿ ಮಾಹಿತಿ ಲಭಿಸಿದೆ.

ಅಕ್ರಮವಾಗಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿದ ಕಾರಣಕ್ಕಾಗಿ ನಾಲ್ವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಕುಮಾರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. 

ಬಂಧಿತರಿಂದ 8 ಕೆ.ಜಿ. ಕಡವೆ ಮಾಂಸ, ಕೋಡು ಹೊಂದಿರುವ ಕಡವೆಯ ತಲೆ ಮತ್ತು ಚರ್ಮವನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯಿದೆ, ಅಕ್ರಮ ಬೇಟೆ, ಅರಣ್ಯಕ್ಕೆ ಅಕ್ರಮ ಪ್ರವೇಶ ಮತ್ತಿತ್ತರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಡಿಕೇರಿ ಡಿಎಫ್‍ಓ ಪ್ರಭಾಕರನ್, ವನ್ಯಜೀವಿ ವಲಯದ ಎಸಿಎಫ್ ನೀಲೇಶ್ ಶಿಂಧೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾಗಮಂಡಲ ಮತ್ತು ಸಂಪಾಜೆ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News