ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನ್ಯಾಯದ ಅಪಹಾಸ್ಯ: ಸಿಪಿಎಂ

Update: 2020-10-01 16:57 GMT

ಬೆಂಗಳೂರು, ಅ. 1: `ಬಾಬರಿ ಮಸೀದಿ ಧ್ವಂಸ ಪ್ರಕರಣ ಪೂರ್ವನಿಯೋಜಿತವಲ್ಲ, ಆಕಸ್ಮಿಕ' ಎಂದು ಹೇಳಿ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಎಲ್ಲ 32 ಆರೋಪಿಗಳನ್ನು ನಿರ್ದೊಷಿಗಳೆಂದು ತೀರ್ಪು ನೀಡಿ ಕೇಸನ್ನು ಖುಲಾಸೆಗೊಳಿಸಿದೆ. ಈ ತೀರ್ಪನ್ನು ಬಿಜೆಪಿ ಸ್ವಾಗತಿಸಿ ಸಂಭ್ರಮಾಚರಣೆ ನಡೆಸಿದೆ. ಆದರೆ, ಈ ತೀರ್ಪು ನ್ಯಾಯದ ಅಪಹಾಸ್ಯ ಎಂದು ಸಿಪಿಎಂ ಆರೋಪಿಸಿದೆ.

ಈ ತೀರ್ಪು ನ್ಯಾಯಾಂಗದ ಮೇಲಿರುವ ಜನತೆಯ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನ್ಯಾಯಾಂಗದ ಪರಂಪರೆ ಉಲ್ಲಂಘಿಸಿ ಸಂವಿಧಾನದ ಕಲಂಗಳು ಹಾಗೂ ಹಲವು ಕಾನೂನುಗಳನ್ನು ಗಾಳಿಗೆ ತೂರಿ ಕೇಂದ್ರ ಸರಕಾರ ಹೇಳಿದ್ದನ್ನು ಮಾತ್ರ ಮಾಡುತ್ತಿದೆ. ದೇಶದ ಸಂವಿಧಾನದ 3ನೆ ಅಂಗ ಎಂಬುದನ್ನು ಮರೆಮಾಚುವಂತ ಸ್ಥಿತಿ ಬಂದೊದಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಮಾರುತಿ ಮಾನ್ಪಡೆ ಮತ್ತು ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.

ಭಾರತೀಯ ಮುಸ್ಲಿಂ ಕಾನೂನು ಮಂಡಳಿ ಹೈಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದೆ. 1992ರಲ್ಲಿ ಮಸೀದಿ ಕೆಡವಲು ಸಂಚು ರೂಪಿಸಿದ್ದು ಗೊತ್ತಾಗಿ ಅಂದಿನ ಅಧಿಕಾರಿಗಳು ಮುನ್ನೆಚ್ಚರಿಕೆ ಭಾಗವಾಗಿ ಸಂವಿಧಾನದ 356ನೆ ವಿಧಿಯನ್ನು ಬಳಕೆ ಮಾಡಿ ಬಾಬರಿ ಮಸೀದಿ ಕಟ್ಟಡ ಕೇಂದ್ರ ಸರಕಾರ ತನ್ನ ಸುಪರ್ದಿಗೆ ತಗೆದುಕೊಳ್ಳಬೇಕೆಂದು 2 ದಿನಗಳ ಮುಂಚೆಯೇ ಗೃಹ ಸಚಿವಾಲಯವು ಅಂದಿನ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಅವರಿಗೆ ಕೇಳಿತ್ತು. ಆದರೆ, ಪ್ರಧಾನಮಂತ್ರಿ ತಮ್ಮದೇ ಕಾರಣ ನೀಡಿ ಬಾಬರಿ ಮಸೀದಿ ಕಟ್ಟಡ ಕೇಂದ್ರ ಸರಕಾರದ ವಶಕ್ಕೆ ತೆಗೆದುಕೊಳ್ಳಲು ನಿರಾಕರಿಸಿದರು.

ಅಂದಿನ ಕಾಂಗ್ರೆಸ್ ಆಡಳಿತ ಸರಕಾರ ಬಾಬರಿ ಮಸೀದಿಯ ಕಟ್ಟಡ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಏಕೈಕ ಮಾರ್ಗ ಕೈಚೆಲ್ಲಿತು. ಸಿಬಿಐ ಚಾರ್ಜ್‍ಶೀಟ್ ಸಲ್ಲಿಸಲು ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಆರೋಪಿಗಳು ಖುಲಾಸೆಯಾಗುವಂತೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಬಲಾಢ್ಯ ಆರೋಪಿಗಳಿಗೆ ಅನುಕೂಲವಾಗುವಂತೆ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ ಎಂದು ಉಭಯ ನಾಯಕರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News