ಮಹಿಳೆ-ಮಕ್ಕಳ ರಕ್ಷಣೆಗೆ ವಿಶೇಷ ಮಹಿಳಾ ತಂಡ: ಕೊಡಗು ಜಿಲ್ಲಾ ಪೊಲೀಸ್ ಇಲಾಖೆಗೆ 'ಕಾವೇರಿ ಪಡೆ'ಯ ಬಲ

Update: 2020-10-01 17:01 GMT

ಮಡಿಕೇರಿ ಅ.1: ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ‘ಕಾವೇರಿ ಪಡೆ’ ಎಂಬ ಮಹಿಳಾ ತಂಡವನ್ನು ರಚಿಸಲಾಗಿದ್ದು, ಗುರುವಾರ ಈ ತಂಡಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಸುಮಾರು 18 ಮಂದಿ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿನ್ನೊಳಗೊಂಡ ಕಾವೇರಿ ಪಡೆ ತಂಡದ ಸದಸ್ಯರಿಗೆ ಪ್ರತ್ಯೇಕವಾದ ಸಮವಸ್ತ್ರವನ್ನು ಒದಗಿಸಲಾಗಿದ್ದು, ಈ ತಂಡದ ಸಿಬ್ಬಂದಿಗಳು ಜಿಲ್ಲೆಯ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಗಸ್ತು ತಿರುಗಲು ಪ್ರತ್ಯೇಕವಾಗಿ ಒಂದು ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.

ಈ ಪಡೆಯು ಪ್ರತಿದಿನ ಜಿಲ್ಲೆಯ ವಿವಿಧ ಪಟ್ಟಣಗಳ ಶಾಲಾ ಕಾಲೇಜು, ಬಸ್ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಓಡಾಡುವ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಸೂಕ್ತ ನಿಗಾ ವಹಿಸಲಿದೆ. ಈ ಕಾವೇರಿ ಪಡೆಯನ್ನು ಎರಡು ತಂಡಗಳಾಗಿ ವಿಭಾಗಿಸಿದ್ದು, ಸರದಿಯಂತೆ ಕರ್ತವ್ಯ ನಿರ್ವಹಿಸಲಿದೆ.

ಕಾವೇರಿ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ವಿವಿಧ ಕಾನೂನುಗಳ ಬಗ್ಗೆ ತಿಳುವಳಿಕೆ, ಪೊಲೀಸ್ ಮ್ಯಾನ್ಯುಯಲ್, ಜನಸ್ನೇಹಿ ಪೊಲೀಸ್, ಲಿಂಗ ಸಂವೇದನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಬಗೆಗಿನ ಕಾನೂನಿನ ಬಗ್ಗೆ ತರಬೇತಿ ನೀಡಿ ತಿಳುವಳಿಕೆ ಮೂಡಿಸಲಾಗುತ್ತಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲು ಹಾಗೂ ಅವರ ರಕ್ಷಣೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದ್ದು, ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರು ರಕ್ಷಣೆಗೋಸ್ಕರ ರೂಪಿಸಲ್ಪಟ್ಟ ಒಂದು ವಿಶೇಷ ಪಡೆಯಾಗಿದೆ.
ಜಿಲ್ಲೆಯಲ್ಲಿ ಯಾವುದೇ ಮಹಿಳೆಯರು, ಶಾಲಾ ಕಾಲೇಜಿನ ಹೆಣ್ಣು ಮಕ್ಕಳು ತಮಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳ ಉಂಟಾದಲ್ಲಿ ಕಾವೇರಿ ಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News