ಏಳು ತಿಂಗಳು ಕಳೆದರೂ ಕಾರ್ಮಿಕರಿಗಿಲ್ಲ ಶ್ರಮ ಸಮ್ಮಾನ ಪುರಸ್ಕಾರ

Update: 2020-10-01 17:18 GMT

ಹಾವೇರಿ, ಅ.1: ಪ್ರಸಕ್ತ ವರ್ಷದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 363 ಅಸಂಘಟಿಕ ಕಾರ್ಮಿಕರನ್ನು ಶ್ರಮ ಸಮ್ಮಾನ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಿ ಏಳು ತಿಂಗಳು ಕಳೆಯುತ್ತಿದ್ದರೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸದೇ ಕಾರ್ಮಿಕ ಇಲಾಖೆಯು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ.

ಪ್ರಸ್ತುತ ವರ್ಷದಲ್ಲಿ ಉತ್ತರ ಕನ್ನಡ, ಧಾರವಾಡ, ಹಾವೇರಿ ಜಿಲ್ಲೆಗಳ 363 ಅಸಂಘಟಿತ ಕಾರ್ಮಿಕರನ್ನು ಶ್ರಮ ಸಮ್ಮಾನ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೇಲರ್ ಗಳು, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಮತ್ತು ಭಟ್ಟಿ ಕಾರ್ಮಿಕರು ಸೇರಿ 11 ಅಸಂಘಟಿತ ವಲಯಗಳ ಕಾರ್ಮಿಕರನ್ನು ಈ ಶ್ರಮ ಸಮ್ಮಾನ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

ಪ್ರಶಸ್ತಿಗೆ ಜನವರಿಯಲ್ಲಿ ಅರ್ಜಿಯನ್ನು ಕರೆಯಲಾಗಿತ್ತು. 363 ಅರ್ಜಿಗಳನ್ನು ಅಂತಿಮಗೊಳಿಸಿ, ಪೊಲೀಸ್ ವೆರಿಫಿಕೇಷನ್‍ಗೂ ಕಳುಹಿಸಲಾಗಿತ್ತು. ಪಟ್ಟಿ ಸಿದ್ಧವಾಗಿದ್ದರೂ ಪ್ರಶಸ್ತಿ ಪ್ರದಾನಕ್ಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಈ ವರ್ಷ ಮೂರು ಜಿಲ್ಲೆಗಳಲ್ಲಿ 363 ಕಾರ್ಮಿಕರ ಪಟ್ಟಿ ಅಂತಿಮಗೊಳಿಸಿ, ಮಾ.1ರಂದು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಸಮಾರಂಭ ನಡೆಯಲಿಲ್ಲ'' ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News