ಸೋಂಕಿಗೆ ಕೊರೋನ ವಾರಿಯರ್ ಬಲಿ

Update: 2020-10-01 17:44 GMT

ಯಾದಗಿರಿ, ಅ.1: ಕೊರೋನ ಸೋಂಕಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ ಒಬ್ಬರು ಮೃತರಾಗಿದ್ದಾರೆ.

ಯಾದಗಿರಿ ತಾಲೂಕಿನ ಕೌಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ ಗೀತಾ ಮಹೇಶ್(32) ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂಟು ದಿನಗಳ ಹಿಂದೆ ಗೀತಾ ಹಾಗೂ ಅವರ ಪತಿಗೆ ಕೊರೋನ ಸೋಂಕು ದೃಢಪಟ್ಟಿತ್ತು.

ದಂಪತಿ ಯಾದಗಿರಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಎರಡು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು. ಅಸ್ತಮಾದಿಂದ ಬಳಲುತ್ತಿದ್ದ ಗೀತಾ ಅವರನ್ನ ಅನಾರೋಗ್ಯ ನಿಮಿತ್ತ ಬುಧವಾರ ರಾತ್ರಿ ಮತ್ತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಉಸಿರಾಟದ ತೊಂದರೆಯಿಂದ ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕೊರೋನ ವಾರಿಯರ್ ಗೀತಾ ಅವರ ಸಾವಿಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಪರಿಹಾರ ಹಾಗೂ ಸವಲತ್ತುಗಳನ್ನ ಶೀಘ್ರವಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News