ತಹಶೀಲ್ದಾರ್ ಸಹಿ ನಕಲು ಆರೋಪ: ದ್ವಿತೀಯ ದರ್ಜೆ ಗುಮಾಸ್ತ ಅಮಾನತು

Update: 2021-03-12 12:23 GMT

ಚಾಮರಾಜನಗರ, ಅ.1: ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕರೊಬ್ಬರು ಹಣದ ಆಸೆಗೆ ತಹಶೀಲ್ದಾರ್ ಸಹಿಯನ್ನು ನಕಲು ಮಾಡಿರುವ ಆರೋಪದಡಿ ಸೇವೆಯಿಂದ ಅಮಾನತಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹಣದ ಆಸೆಗಾಗಿ ದ್ವಿತೀಯ ದರ್ಜೆ ಗುಮಾಸ್ತನಾಗಿರುವ ಅಬ್ದುಲ್ ಮುಜಾಹಿದ್ ಹಿಂದಿನ ತಹಶೀಲ್ದಾರ್ ಅವರ ಸಹಿ ನಕಲು ಮಾಡಿದ್ದು ಖಚಿತವಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶಿಸಿದ್ದು, ಆತನ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ: ಚಾಮರಾಜನಗರ ತಾಲೂಕಿನ ಕಾಡಹಳ್ಳಿಯ ಮಹದೇವಸ್ವಾಮಿ ಬಿನ್ ಸಿದ್ದೂರಯ್ಯ ಎಂಬಾತ ಗ್ರಾಮದಲ್ಲಿ ಸರಕಾರಕ್ಕೆ ಸೇರಿದ ಸರ್ವೇ ನಂ.157ರಲ್ಲಿ 20/36 ಅಳತೆಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಇದನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದ. ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿರುವ ಅಬ್ದುಲ್ ಮುಜಾಹಿದ್ ಕಾಡಹಳ್ಳಿ ಗ್ರಾಮದ ಮಹದೇವಸ್ವಾಮಿರವರಿಗೆ ಹಿಂದಿನ ತಹಶೀಲ್ದಾರ್ ಸಹಿ ಹಾಕಿಸಿ ಹಣ ಪಡೆದಿದ್ದಾರೆ.

ಹಕ್ಕು ಪತ್ರಕ್ಕಾಗಿ ಮಹದೇವಸ್ವಾಮಿ ಪದೇ ಪದೇ ಕಚೇರಿಗೆ ಆಗಮಿಸುತ್ತಿದ್ದರು. ಅಲ್ಲದೇ, ತಮ್ಮ ಕೆಲಸಕ್ಕಾಗಿ ಗುಮಾಸ್ತ ಅಬ್ದುಲ್ ಮುಜಾಹಿದ್ ಮೇಲೆ ಒತ್ತಡ ಹೇರತೊಡಗಿದ್ದ. ಹಾಗಾಗಿ ಅಬ್ದುಲ್ ಮುಜಾಹಿದ್ ಮಹದೇಸ್ವಾಮಿಯ ಅರ್ಜಿಯ ಬಗ್ಗೆ ಕಡತ ತಯಾರಿಸಿ ತಾನೇ ಹಿಂದಿನ ತಹಶೀಲ್ದಾರರ ಸಹಿ ನಕಲು ಮಾಡಿ ಹಕ್ಕು ಪತ್ರ ನೀಡಿದ್ದಾನೆ.

ಈ ಹಕ್ಕುಪತ್ರದ ನೈಜತೆ ಬಗ್ಗೆ ಮಹದೇವಸ್ವಾಮಿಗೆ ಅನುಮಾನ ಬಂದಿದೆ. ಇದಕ್ಕೆ ಕಾರಣ ಹಕ್ಕು ಪತ್ರದಲ್ಲಿದ್ದ ಸಹಿ. ಈ ಹಿಂದೆ ಇದ್ದ ತಹಶೀಲ್ದಾರ್ ಮಹೇಶ್ ಹೆಸರಿನಲ್ಲಿ ಸಹಿ ಇರುವುದು ಕಂಡು ಮಹದೇವಸ್ವಾಮಿ, ಈಗಿನ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿರವರ ಗಮನ ತಂದಿದ್ದಾರೆ. ದೂರಿನ ಅನ್ವಯ ತನಿಖೆ ನಡೆಸಿದಾಗ ಇದು ಹಿಂದಿನ ತಹಶೀಲ್ದಾರ್ ಮಹೇಶ್ ಅವರ ಸಹಿಯನ್ನು ಪೋರ್ಜರಿ ಮಾಡಿ ನೀಡಿರುವ ಹಕ್ಕು ಪತ್ರ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಾಲಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವಿಚಾರಣೆ ನಡೆಸಿ ತಹಶೀಲ್ದಾರ್ ಅವರ ಸಹಿ ನಕಲು ಮಾಡಿದ ಆರೋಪದ ಮೇಲೆ ಗುಮಾಸ್ತ ಅಬ್ದುಲ್ ಮುಜಾಹಿದ್‌ನನ್ನು ಸರ್ಕಾರಿ ಸೇವೆಯಿಂದ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News