ಡೊನಾಲ್ಡ್ ಟ್ರಂಪ್‌ಗೆ ಕೊರೋನ ದೃಢ,ಪತ್ನಿ ಮೆಲನಿಯಾಗೂ ಸೋಂಕು; ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ದಂಪತಿಗೆ ಕ್ವಾರಂಟೈನ್

Update: 2020-10-02 17:14 GMT

ವಾಶಿಂಗ್ಟನ್,ಅ.2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾ ಟ್ರಂಪ್ ಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದ್ದು, ಇಬ್ಬರೂ ಕ್ವಾರಂಟೈನ್‌ನಲ್ಲಿದ್ದಾರೆ.

 ಈ ಬಗ್ಗೆ ಗುರುವಾರ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದ್ದು ‘‘ನಾನು ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಕೋವಿಡ್ ಪಾಸಿಟಿವ್ ಬಂದಿದೆ’’ ಎಂದು ಹೇಳಿದ್ದಾರೆ. ‘‘ನಾವು ತಕ್ಷಣದಿಂದಲೇ ಕ್ವಾರಂಟೈನ್‌ಗೊಳಗಾಗಿದ್ದೇವೆ ಹಾಗೂ ಚಿಕಿತ್ಸಾ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ನಾವಿಬ್ಬರೂ ಜೊತೆಯಾಗಿ ಗುಣಮಖರಾಗಿ ಹೊರಬರಲಿದ್ದೇವೆ’’ ಎಂದವರು ಟ್ವೀಟಿಸಿದ್ದಾರೆ.

 74 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್, ಬೊಜ್ಜಿನ ಸಮಸ್ಯೆಯನ್ನು ಕೂಡಾ ಎದುರಿಸುತ್ತಿರುವುದರಿಂದ ಅವರ ಆರೋಗ್ಯದ ಬಗ್ಗೆ ಕಳವಳಗಳು ವ್ಯಕ್ತವಾಗಿವೆ.ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ತಿಂಗಳಿರುವಾಗ ಟ್ರಂಪ್ ಅವರಿಗೆ ಕೊರೋನ ತಗಲಿರುವುದು ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ಅಮೆರಿಕದ ರಾಜಕೀಯ ವಲಯಗಳು ಅಭಿಪ್ರಾಯಿಸಿವೆ.

ಟ್ರಂಪ್ ಅವರು ದೇಹಸ್ಥಿತಿ ಉತ್ತಮವಾಗಿದೆ ಹಾಗೂ ಅವರು ಶ್ವೇತಭವನದಲ್ಲೇ ಕ್ವಾರಂಟೈನ್‌ನಲ್ಲಿದ್ದು ತನ್ನ ಕರ್ತವ್ಯಗಳನ್ನು ನಿರ್ವಹಿಸಬಹುದಾಗಿದೆಯೆಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಸ್ಕಾಟ್ ಕಾನ್ಲಿ ತಿಳಿಸಿದ್ದ್ಜಾರೆ.

 ಈ ಮಧ್ಯೆ ಟ್ರಂಪ್ ಅವರ ಅತ್ಯಂತ ಆಪ್ತ ಸಲಹೆಗಾರ್ತಿ ಹೋಪ್ ಹಿಕ್ಸ್ ಅವರಿಗೂ ಸೋಂಕು ತಗಲಿರುವುದಾಗಿ ವರದಿಯಾಗಿದೆ. ಹೋಪ್‌ಹಿಕ್ಸ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಕಳೆದ ಕೆಲವು ದಿನಗಳಿಂದ ಟ್ರಂಪ್ ಜೊತೆಗೆ ಹಲವು ಬಾರಿ ಪ್ರಯಾಣಿಸಿದ್ದರು.

     ಓಹಿಯೋದಲ್ಲಿ ನಡೆದ ಅಧ್ಯಕ್ಷೀಯ ಚುನಾವಣಾ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಏಲ್‌ಫೋರ್ಸ್ ಓನ್ ವಿಮಾನದಲ್ಲಿ ಟ್ರಂಪ್ ಹಾಗೂ ಅವರ ಬಳಗ ಪ್ರಯಾಣಿಸಿದಾಗ ಹಿಕ್ಸ್ ಕೂಡಾ ಜೊತೆಗಿದ್ದರು. ಡುಲುಚ್,ಮಿನ್ನೆಸೋಟಾದಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿಯೂ ಹಿಕ್ಸ್ ಅವರೊಂದಿಗಿದ್ದರು. ಹಿಕ್ಸ್ ಅವರು ಕೊರೋನ ವೈರಸ್ ಸೋಂಕಿಗೊಳಗಾದ ಶ್ವೇತಭವನದ ನಾಲ್ಕನೆ ಉದ್ಯೋಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News