ಆದಿತ್ಯನಾಥ್ ಯೋಗಿಯೋ ಅಥವಾ ರೋಗಿಯೋ ಎನ್ನುವುದು ತಿಳಿಯುತ್ತಿಲ್ಲ: ಸಿದ್ದರಾಮಯ್ಯ

Update: 2020-10-02 12:14 GMT

ಬೆಳಗಾವಿ, ಅ.2: ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಉತ್ತರ ಪ್ರದೇಶದ ಹತ್ರಾಸ್‍ಗೆ ತೆರಳುತ್ತಿದ್ದ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ಯುಪಿ ಸಿಎಂ ಸೂಚನೆಯಂತೆ ತಡೆಯುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಶುಕ್ರವಾರ ಬೆಳಗಾವಿ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶವನ್ನು ಈಗಾಗಲೇ ಜಂಗಲ್ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅವರು ಯೋಗಿಯೋ ಅಥವಾ ರೋಗಿಯೋ ಎನ್ನುವುದು ನಮಗೆ ತಿಳಿಯುತ್ತಿಲ್ಲ ಎಂದು ನುಡಿದರು.

ಕಳೆದ ವರ್ಷ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬೆಳೆ ಹಾನಿ, ಮನೆ ಹಾನಿ ಸೇರಿ ಎಲ್ಲ ಹಾನಿಗಳ ಪರಿಹಾರ ನೀಡಲಾಗುವುದು ಎಂದು ಬಿಎಸ್‍ವೈ ಅವರು ಭರವಸೆ ನೀಡಿದ್ದರು. ಆದರೆ, ಆ ಭರವಸೆಯಾಗಲಿ ಹಾಗೂ ಪ್ರಸ್ತುತ ವರ್ಷ ಸುರಿದ ಭಾರೀ ಮಳೆಯ ಹಾನಿಯ ಪರಿಹಾರವನ್ನು ಆಗಲಿ ನೀಡಿಲ್ಲ ಎಂದು ಕಿಡಿಕಾರಿದರು.

ನಮ್ಮ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಒಂದೇ ಒಂದು ಚೆಕ್‍ ಬೌನ್ಸ್ ಆಗಿಲ್ಲ. ಪ್ರಸ್ತುತ ಇರುವ ರಾಜ್ಯ ಸರಕಾರ ಸರಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಈ ಬಗ್ಗೆ ಕಟೀಲ್ ಮಾತನಾಡುವುದನ್ನು ಬಿಟ್ಟು ಕಳೆದ ಕಾಂಗ್ರೆಸ್ ಸರಕಾರವನ್ನು ಬ್ರಿಟಿಷರ್ ಆಡಳಿತಕ್ಕೆ ಹೋಲಿಕೆ ಮಾಡುವುದನ್ನು ಕಲಿತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News