ಈ ವರ್ಷ ಶಿಕ್ಷಕರಿಗೆ 'ಮಧ್ಯಂತರ ರಜೆ' ಇಲ್ಲ !

Update: 2020-10-02 12:24 GMT

ಬೆಂಗಳೂರು, ಅ.2: ಕೋವಿಡ್‍ನಿಂದಾಗಿ ಈ ವರ್ಷ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿರುವ ಪರಿಣಾಮವಾಗಿ ಶಿಕ್ಷಕರಿಗೆ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ನೀಡಲಾಗುತ್ತಿದ್ದ ‘ಮಧ್ಯಂತರ ರಜೆ’ ರದ್ದುಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ಅಕ್ಟೋಬರ್ ತಿಂಗಳ ಮಧ್ಯಂತರ ರಜೆಯನ್ನು ರದ್ದುಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಅಕ್ಟೋಬರ್ 3 ರಿಂದ 25 ರವರೆಗೆ ರಜೆಯನ್ನು ನೀಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಆದೇಶದಂತೆ ಈಗ 2020-21 ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ಮಧ್ಯಂತರ ರಜೆ ನಿಗದಿಪಡಿಸಿ ಈ ಹಿಂದೆ ಫೆ.14 ರಂದು ಹೊರಡಿಸಿದ್ದ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ರದ್ದುಪಡಿಸಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಬಗ್ಗೆ ಇಲಾಖೆ ವಿವಿಧ ಹಂತಗಳಲ್ಲಿ ಹೊರಡಿಸುವ ಆದೇಶಗಳಂತೆ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ವಿದ್ಯಾಗಮ ಕಲಿಕಾ ಕಾರ್ಯಕ್ರಮವನ್ನು ಸರ್ಕಾರದ ಮುಂದಿನ ಆದೇಶದ ತನಕ ಯಥಾವತ್ ಕಾರ್ಯ ರೂಪಕ್ಕೆ ತರಬೇಕೆಂದು ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News