ಲಂಚ ಪಡೆಯುವ ಕೆಲಸವನ್ನು ಸಿಎಂ ಪುತ್ರ ವಿಜಯೇಂದ್ರಗೆ ವಹಿಸಲಾಗಿದೆ: ಮಾಜಿ ಸಚಿವ ಶರಣಪ್ರಕಾಶ ಪಾಟೀಲ
ಕಲಬುರ್ಗಿ, ಅ.2: ರಾಜ್ಯ ಬಿಜೆಪಿ ಸರಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ನಿರತವಾಗಿದ್ದು, ಲಂಚ ಪಡೆಯುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವಹಿಸಲಾಗಿದೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಆರೋಪಿಸಿದ್ದಾರೆ.
ಶುಕ್ರವಾರ ಸೇಡಂನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಿಸಾನ್ ಮಜದೂರ್ ದಿನಾಚರಣೆ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರ ಅಧಿಕಾರಿಗಳ ವರ್ಗಾವಣೆಯನ್ನೇ ಮುಂದಿಟ್ಟುಕೊಂಡು, ರಾಜ್ಯವನ್ನೇ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ರೈತರು, ಕಾರ್ಮಿಕರನ್ನು ಆರ್ಥಿಕವಾಗಿ ಕುಂದಿಸುವ ಹಾಗೂ ಸ್ವಶಕ್ತಿಗೆ ಪೆಟ್ಟು ಬೀಳುವ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಇಂಥ ಕಾನೂನುಗಳನ್ನು ವಿರೋಧಿಸಿ ಇಡೀ ದೇಶದಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೂ ಸರಕಾರ ಕಾನೂನು ಜಾರಿಗೆ ತಂದು ಅಂಬಾನಿ, ಅದಾನಿ ಪರ ಕೆಲಸ ಮಾಡಲು ಹೊರಟಿವೆ. ಇದರಿಂದ, ದೇಶದ ರೈತರಿಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಪೆಟ್ಟು ಬೀಳಲಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿ ಪಾಟೀಲ, ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ರಾಜಶೇಖರ ಪುರಾಣಿಕ ಸೇರಿ ಹಲವರು ಹಾಜರಿದ್ದರು.