ಗಾಂಧೀಜಿ ಹಾಕಿಕೊಟ್ಟ ಹಾದಿಯಲ್ಲಿ ದೇಶದ ಐಕ್ಯತೆ, ಸಮಗ್ರತೆ ರಕ್ಷಿಸಬೇಕಿದೆ: ಡಿ.ಕೆ.ಶಿವಕುಮಾರ್

Update: 2020-10-02 15:32 GMT

ಬೆಳಗಾವಿ, ಅ.2: ಮಹಾತ್ಮ ಗಾಂಧೀಜಿ ಅವರ ಚಿಂತನೆ, ವಿಚಾರವೆ ಕಾಂಗ್ರೆಸ್ ತತ್ವ. ಅವರ ಮಾರ್ಗದರ್ಶನವನ್ನು ನಾವು ಬಳಸಿಕೊಂಡು ಇಂದು ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯನ್ನು ಕಾಪಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇಲ್ಲಿನ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧಿಜಿ ಅವರ ಕೊಡುಗೆಯನ್ನು ಸ್ಮರಿಸುತ್ತಾ ದೇಶದ ರಕ್ಷಣೆಗಾಗಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ಕೊಟ್ಟರು.

ನಾನು ಪ್ರತಿಜ್ಞೆ ಪಡೆದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ನಂತರ ಬೆಂಗಳೂರಿನಿಂದ ಹೊರಗಡೆ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ಇದು ಹರ್ಡಿಕರ್ ಅವರ ಪುಣ್ಯ ಭೂಮಿ. ಈ ದೇಶಕ್ಕೆ ಶಿಸ್ತಿನ ನಾಯಕರನ್ನು ತಯಾರು ಮಾಡಬೇಕು, ಸೇವೆ ಮಾಡಬೇಕು ಎಂದು ತಮ್ಮ ಚಿತನೆ, ಆಲೋಚನೆ, ಆಚಾರ, ವಿಚಾರಗಳನ್ನು ಪ್ರಚಾರ ಮಾಡಿದ ಶ್ರೇಷ್ಠ ಭೂಮಿ ಇದು ಎಂದು ಅವರು ಹೇಳಿದರು.

ಬೆಳಗಾವಿ ಮತ್ತು ಉತ್ತರ ಕರ್ನಾಟಕ ಜಿಲ್ಲೆ ಜನ ಈ ದೇಶದ ಸ್ವಾತಂತ್ರ್ಯಕ್ಕೊಸ್ಕರ ಗಾಂಧಿಜಿ ಅವರ ಜೊತೆ ಹರ್ಡಿಕರ್ ಅವರ ಜತೆ ಹೋರಾಡಿದ್ದಾರೆ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಎಲ್ಲಿದ್ದರು ಎಂದರೆ ಅದು ಈ ಜಿಲ್ಲೆಗಳಲ್ಲಿ. ಅವರು ಸ್ವಾತಂತ್ರ್ಯ ತಂದುಕೊಡದೆ ಇದ್ದಿದ್ದರೆ, ನಾವು ಇಂದು ಶಾಸಕರಾಗಿ ಈ ಕುರ್ಚಿಯ ಮೇಲೆ ಕೂರಲು ಸಾಧ್ಯವಾಗುತ್ತಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.

ದೇಶಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಡಿಪಾಯ ಹಾಕಿಕೊಟ್ಟಿದ್ದರಿಂದಲೇ ನಾವಿಂದು ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಇಲ್ಲಿ ಸೇರಲು ಸಾಧ್ಯವಾಗಿದೆ. ಜವಾಹರ್ ಲಾಲ್ ನೆಹರೂ ಅವರ ವಿಶ್ವಾಸಕ್ಕೆ, ಸ್ನೇಹಕ್ಕೆ ಹಿಂದೂಸ್ಥಾನ್ ಸೇವಾದಳ, ಕಾಂಗ್ರೆಸ್ ಸೇವಾದಳ ಎಂದು ಪ್ರಾರಂಭ ಮಾಡಿ ಈ ರಾಷ್ಟ್ರಕ್ಕೆ ಶಿಸ್ತಿನ ನಾಯಕರನ್ನು ಹರ್ಡಿಕರ್ ತಯಾರು ಮಾಡಿದರು. ಈಗ ಈ ಸೇವಾದಳಕ್ಕೆ ಶಕ್ತಿ ನೀಡಬೇಕು ಎಂದು ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದು ಅವರು ತಿಳಿಸಿದರು.

ಗಾಂಧಿಜಿ ಅವರ ಚಿಂತನೆ ನಾವು ಮಾತನಾಡಲು ಹೊರಟರೆ ಎಷ್ಟು ದಿನವಾದರೂ ಸಾಲದು. ಅವರ ಚಿಂತನೆ, ವಿಚಾರವೇ ಕಾಂಗ್ರೆಸ್ ತತ್ವ. ಅವರ ಮಾರ್ಗದರ್ಶನ ಈ ದೇಶಕ್ಕೆ ಮಾರ್ಗದರ್ಶನ. ಗಾಂಧಿಜಿ ಅವರ ತ್ಯಾಗ ಮನೋಭಾವವನ್ನು ನಾವು ಮರೆಯಲು ಸಾಧ್ಯವಿಲ್ಲ. ಗಾಂಧೀಜಿ ಹಾಗೂ ಅಂಬೇಡ್ಕರ್ ಚಿಂತನೆಗಳು ಸ್ವಾತಂತ್ರ್ಯಕ್ಕೂ ಮುನ್ನ ಹಾಗೂ ನಂತರ ದೇಶಕ್ಕೆ ಪ್ರಮುಖ ಎಂದು ಅವರು ಹೇಳಿದರು.

ಅಂಬೇಡ್ಕರ್ ಅವರು ಕೇವಲ ಒಂದು ವರ್ಗ ಆಸ್ತಿ ಅಲ್ಲ. ದೇಶದಲ್ಲಿ ನೊಂದ ಪ್ರತಿಯೊಬ್ಬರಿಗೂ ಧ್ವನಿಯಾಗಿ ಸಮಾನತೆ ತಂದುಕೊಡುವ ನಾಯಕ. ಹೀಗಾಗಿ ನಾವು ಅವರ ತತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ಇಂದು ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗೆ ಧಕ್ಕೆ ಉಂಟಾಗುತ್ತಿದೆ. ಈ ದೇಶದಲ್ಲಿ ಅಭದ್ರತೆ ಹೆಚ್ಚಾಗುತ್ತಿದ್ದು, ದೇಶವನ್ನು ಉಳಿಸಬೇಕಿದೆ ಎಂದು ಅವರು ತಿಳಿಸಿದರು.

ಇಂದು ಬಿಜೆಪಿಯವರು ಜಾತಿ, ಧರ್ಮದ ಹೆಸರಲ್ಲಿ ಸಮಾಜವನ್ನು ಛಿದ್ರ ಮಾಡುತ್ತಿದ್ದಾರೆ. ಇದಕ್ಕಾಗಿ ನಾವು ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಚಾರ ವಿಚಾರವನ್ನು ಎತ್ತಿಹಿಡಿಯಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಸಹಿ ಸಂಗ್ರಹಕ್ಕೆ ಆದೇಶ: ದೇಶವನ್ನು ಇಂದು ಒಗ್ಗಟ್ಟಿನಿಂದ ಇಡಬೇಕಾದ ಸಂದರ್ಭ ಎದುರಾಗಿದೆ. ಇವತ್ತಿನಿಂದ ಈ ತಿಂಗಳ 30ರವರೆಗೂ ದೇಶದ ರೈತರು, ಕಾರ್ಮಿಕರು, ಯುವಕರು, ವ್ಯಾಪಾರಿಗಳು ಯಾರು ಕಾನೂನಿನ ಅಡಿಯಲ್ಲಿ ಅಭದ್ರತೆ ಎದುರಿಸುತ್ತಿದ್ದಾರೆ ಅವರ ರಕ್ಷಣೆಗಾಗಿ ಸಹಿ ಸಂಗ್ರಹ ಪ್ರಾರಂಭಿಸಲು ಸೋನಿಯಾಗಾಂಧಿ ಆದೇಶ ನೀಡಿದ್ದು, ಅದನ್ನು ಜನರ ಪರವಾಗಿ ಅವರು ರಾಷ್ಟ್ರಪತಿಗೆ ಹಸ್ತಾಂತರಿಸಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎಪಿಎಂಸಿ, ಕಾರ್ಮಿಕ, ಭೂಸುಧಾರಣೆ  ಕಾನೂನಿನ ಮೂಲಕ ಜನವಿರೋಧಿ ಕೆಲಸಕ್ಕೆ ಮುಂದಾಗಿರುವುದರ ವಿರುದ್ಧ ಪ್ರತಿಭಟಿಸಲು ಈ ತೀರ್ಮಾನ ಮಾಡಿದ್ದೇವೆ. ನೀವು ಇದರಲ್ಲಿ ನಿಮ್ಮ ದೂರವಾಣಿ ಸಂಖ್ಯೆ ಹಾಗೂ ನಿಮ್ಮ ಸಹಿ ಹಾಕಬೇಕು. ರಾಜ್ಯಕ್ಕೆ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಈ ಆಂದೋಲನವನ್ನು ಯಶಸ್ವಿಯಾಗಿ ಮಾಡಬೇಕು ಎಂದು ಶಿವಕುಮಾರ್ ಕರೆ ನೀಡಿದರು.

ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಜೈ ಜವಾನ್ ಜೈ ಕಿಸಾನ್ ಎಂಬ ಸಂದೇಶದ ಮೂಲಕ ದೇಶಕ್ಕೆ ರಕ್ಷಣೆ. ಜತೆಗೆ ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ನಿಮ್ಮೆಲ್ಲರ ಜತೆ ಸೇರಿ ಆಚರಿಸುತ್ತಿರುವುದು ನಮ್ಮ ಭಾಗ್ಯ. ಈ ದೇಶದ ರಕ್ಷಣೆಗಾಗಿ ನೀವೆಲ್ಲರು ಕಾಂಗ್ರೆಸ್ ಜತೆ ಕಟ್ಟಾಳುಗಳಾಗಿ ದುಡಿಯಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News