ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಬೇಕು: ಮಂಡ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ

Update: 2020-10-02 15:35 GMT

ಮಂಡ್ಯ, ಅ.2: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಅಲ್ಲಿನ ಸರಕಾರವನ್ನು ವಜಾಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಉತ್ತರ ಪ್ರದೇಶದ ಹಸ್ರತ್ ಸಂತ್ರಸ್ತೆ ಬಾಲಕಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ದಲಿತರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಗಿ ಆದಿತ್ಯನಾಥರ ಸರಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದೆ. ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಮಾನವೀಯ ಗುಣವಿಲ್ಲದ ಖಾವಿಧಾರಿ ಮುಖ್ಯಮಂತ್ರಿಯೊಬ್ಬರ ಆಡಳಿತದಲ್ಲಿ ಇಷ್ಟೊಂದು ಹೇಯ ಕೃತ್ಯಗಳು, ಅಪರಾಧಗಳು, ಮಾನಸಿಕ ಹಿಂಸೆಗಳು, ಕೊಲೆಗಳು ಸಾಲು ಸಾಲಾಗಿ ನಡೆಯುತ್ತಿರುವುದು ದುರಂತ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಾಥರಸ್‍ಗೆ ಹೋಗದಂತೆ ಪೊಲೀಸರ ಮೂಲಕ ತಡೆ ಹಾಕಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಯೋಗಿನೋ ಅಥವಾ ಮಾನಸಿಕ ರೋಗಿನೋ ಗೊತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಪಲ್ಲವಿ, ವಿಜಯಲಕ್ಷ್ಮಿ, ವೀಣಾ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News