75 ವರ್ಷದ ನಂತರ ಅಧಿಕಾರ ರಾಜಕೀಯದಿಂದ ನಿವೃತ್ತಿ ಬಿಜೆಪಿಯ ನಿಯಮ: ಸಚಿವ ಸಿ.ಟಿ.ರವಿ

Update: 2020-10-02 17:12 GMT

ಚಿಕ್ಕಮಗಳೂರು, ಅ.2: ನಾನು ರಾಜೀನಾಮೆ ನೀಡಬೇಕೋ, ಬೇಡವೋ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ. 75 ವರ್ಷಗಳ ನಂತರ ಅಧಿಕಾರ ರಾಜಕೀಯದಿಂದ ನಿವೃತ್ತಿ ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿದೆ. ಅಲಿಖಿತ ನಿಯಮಗಳನ್ನು ಕೆಲವೊಮ್ಮೆ ಬದಲಾಯಿಸಿದ ನಿದರ್ಶನಗಳೂ ಇವೆ. ಅದು ಪಕ್ಷದ ವರಿಷ್ಠರ ನಿರ್ಧಾರ. ನನ್ನ ರಾಜೀನಾಮೆ ಸಂಬಂಧ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಚಿವ ಸ್ಥಾನದಲ್ಲಿ ಮುಂದುವರಿಯಬೇಕೆ, ಬೇಡವೇ ಎಂಬುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದ ಬಗ್ಗೆ ವೈಯಕ್ತಿಕ ನಿರೀಕ್ಷೆ ಇರಲಿಲ್ಲ, ಪಕ್ಷದ ವರಿಷ್ಠರ ಮುಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರಲಿಲ್ಲ, ಆದರೆ ಅನಿರೀಕ್ಷಿತವಾಗಿ ಅವಕಾಶ ಬಂದಿದೆ. ನನ್ನ ಜೀವನ ರೈತ ಚಳುವಳಿಯಿಂದ ಆರಂಭಗೊಂಡು ವಿದ್ಯಾರ್ಥಿ ಪರಿಷತ್‍ನಿಂದ ರಾಜಕೀಯ ಜೀವನಕ್ಕೆ ತಿರುವು ಸಿಕ್ಕಿದೆ. ಇದೇ ರೀತಿ ಅನೇಕ ತಿರುವು ಸಿಕ್ಕಿದ್ದು, ಸದ್ಯ ರಾಷ್ಟ್ರ ರಾಜಕೀಯದಲ್ಲಿ ಸ್ಥಾನ ಸಿಕ್ಕಿರುವುದು ನನ್ನ ಜೀವನದ ದೊಡ್ಡ ತಿರುವಾಗಿದೆ ಎಂದರು.

ಪಕ್ಷದ ವರಿಷ್ಠರು ನಿಮ್ಮ ಆದ್ಯತೆ ಅಧಿಕಾರವೋ ಅಥವಾ ಪಕ್ಷ ಸಂಘಟನೆಯೋ ಎಂದು ಕೇಳಿದಾಗ ಪಕ್ಷ ಸಂಘಟನೆ ಎಂದು ಹೇಳಿದ್ದೆ, ಆಗ ಅವರು ರಾಷ್ಟ್ರೀಯ ತಂಡದಲ್ಲಿ ನೀವು ಇರುತ್ತೀರಿ ಎಂದಿದ್ದರು. ಯಾವ ಹುದ್ದೆ ನೀಡುತ್ತಾರೆ ಎಂಬುದು ಗೊತ್ತಿರಲಿಲ್ಲ, ಇಂದು ವರಿಷ್ಠರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಜವಾಬ್ದಾರಿ ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬ ಅರಿವು ನನಗಿದೆ. ಅನಂತ್‍ ಕುಮಾರ್ ಅವರ ಬಳಿಕ ದೊಡ್ಡ ಹುದ್ದೆ ಚಿಕ್ಕಮಗಳೂರಿಗೆ ದೊರಕಿರುವುದು ನನ್ನ ಸೌಭಾಗ್ಯವಾಗಿದೆ. ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.

ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಘಟನೆಯನ್ನು ಖಂಡಿಸುತ್ತೇನೆ. ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಘಟನೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಮನೋಭಾವನೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೋರುತ್ತಿವೆ. ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಶಿಕ್ಷೆ ನೀಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅತ್ಯಾಚಾರಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಶಿಕ್ಷೆಯಾಗುತ್ತದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜಸ್ಥಾನದಲ್ಲೂ ಇಂತಹದ್ದೇ ಅತ್ಯಾಚಾರ ಪ್ರಕರಣ ನಡೆದಿತ್ತು, ಆಗ ರಾಹುಲ್ ಗಾಂಧಿ ಕಾಣಿಸಿಕೊಳ್ಳಲಿಲ್ಲ, ಪ್ರಿಯಾಂಕ ಗಾಂಧಿಯೂ ಕಣ್ಣೀರು ಹಾಕಲಿಲ್ಲ, ಈಗ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ದನ ಸತ್ತರೆ ರಣ ಹದ್ದುಗಳು ಕಾಯುವ ರೀತಿಯಲ್ಲಿ ಇಂತಹ ಘಟನೆಗಳಿಗೆ ಕಾಯುತ್ತಿದ್ದ ರಣಹದ್ದಿನ ಮನೋಭಾವನೆಯನ್ನು ಕಾಂಗ್ರೆಸ್ ತೋರಿಸುತ್ತಿದೆ. ಸಾಂತ್ವನ ಹೇಳುವುದು ಪ್ರದರ್ಶನ ಆಗಬಾರದು, ಕಾಂಗ್ರೆಸ್‍ನವರು ಅಲ್ಲಿ ಪ್ರದರ್ಶನಕ್ಕೆ ಹೊರಟ್ಟಿದ್ದಾರೆ ಎಂದು ಸಿ.ಟಿ.ರವಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News