ಮಿಲಿಯಗಟ್ಟಲೆ ಮಂದಿಯನ್ನು ಉಳಿಸುವ ಮಹಾ ಪರ್ವತಗಳು

Update: 2020-10-02 19:30 GMT

ಹಿಮಾಲಯ ಎಂಬ ಶಬ್ದ ಸಂಸ್ಕೃತದ ‘ಹಿಮ’ ಮತ್ತು ‘ಆಲಯ’ ಎಂಬ ಶಬ್ದಗಳಿಂದ ಬಂದಿದೆ. ವಿವಿಧ ಪರಿಸರ ವ್ಯವಸ್ಥೆ(ಇಕೊ ಸಿಸ್ಟಂ)ಯೊಂದನ್ನು ಹೊಂದಿರುವ ಪರ್ವತ ಶ್ರೇಣಿಗಳಲ್ಲೊಂದಾಗಿರುವ ಹಿಮಾಲಯ ಪರ್ವತ ಶ್ರೇಣಿಗಳ ಸೌಂದರ್ಯ, ಮಹತ್ವ ಅವುಗಳ ಸಂಕೀರ್ಣತೆಯಲ್ಲಿದೆ. ಹಿಮಾಲಯವು ವಿಶ್ವದ ಮೂವತ್ತಾರು ಜೀವ ವೈವಿಧ್ಯದ ಹಾಟ್‌ಸ್ಪಾಟ್‌ಗಳಲ್ಲೊಂದು. ‘ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್’ನ ವರದಿಯೊಂದರ ಪ್ರಕಾರ, ಹಿಂದೂಖುಷ್‌ವರೆಗಿನ ಪ್ರದೇಶವನ್ನು ಒಳಗೊಂಡಿರುವ ಹಿಮಾಲಯ ಭೂಪ್ರದೇಶದಲ್ಲಿ 240 ಮಿಲಿಯ ಜನರಿದ್ದಾರೆ.

ಈ ಪರ್ವತಗಳು ಎಂತೆಂತಹ ಪರಿಸರ ಸವಾಲುಗಳನ್ನು ಬೇಕಾದರೂ ಎದುರಿಸಿ ನಿಲ್ಲಬಲ್ಲ ಸಾಮರ್ಥ್ಯವನ್ನು ಹೊಂದಿವೆಯಾದರೂ ಅಲ್ಲಿರುವ ನಿವಾಸಿಗಳು ಸಂಕಷ್ಟಕ್ಕೊಳಗಾಗಿರುವುದು ಒಂದು ವ್ಯಂಗ್ಯವೇ ಸರಿ. ಜೀವನೋಪಾಯಕ್ಕೆ ಕೆಲವೇ ಆಯ್ಕೆಗಳಿರುವ ಸ್ಥಳೀಯ ನಿವಾಸಿಗಳಿಗೆ ಅರಣ್ಯಗಳೇ ಬಹಳ ಮುಖ್ಯವಾದ ಬದುಕಿ ಉಳಿಯಲು ಇರುವ ಬೆಂಬಲ ವ್ಯವಸ್ಥೆ (ಲೈಫ್ ಸಪೋರ್ಟ್ ಸಿಸ್ಟಮ್). ಆದರೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ, ನಾಶವಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳು, ಪ್ರಕೃತಿ ಸಂರಕ್ಷಣೆಗೆ ಪೂರಕವಲ್ಲದ ಬೇಸಾಯ ಕ್ರಮಗಳು, ಮೂಲಭೂತ ಸೌಕರ್ಯಗಳ ಕೊರತೆ ಇತ್ಯಾದಿಗಳು ಸ್ಥಳೀಯ ನಿವಾಸಿಗಳ ಜನರ ಬದುಕಿಗೆ ಉಳಿಯುವಿಕೆಗೆ ಸವಾಲುಗಳನ್ನೆಸೆಯುತ್ತಿವೆ.

ಬೆಳೆಗಳ ಮೇಲೆ ಹಾಗೂ ಜಾನುವಾರುಗಳ ಮೇಲೆ ಕಾಡುಪ್ರಾಣಿಗಳ ದಾಳಿ ಮತ್ತು ಯುವಕರು ಸತತವಾಗಿ ಪರ್ವತ ಪ್ರದೇಶಗಳಿಂದ ಹೊರಕ್ಕೆ ವಲಸೆ ಹೋಗುವುದರ ಪರಿಣಾಮವಾಗಿ ಆಹಾರ ಲಭ್ಯತೆ ಕಡಿಮೆಯಾಗಿದೆ; ಜನರ ಸ್ವಾವಲಂಬನೆ ಕ್ಷೀಣಿಸಿದೆ. ಗಂಡಸರು ವಲಸೆ ಹೋಗುವುದರಿಂದಾಗಿ ಗೃಹಕೃತ್ಯದ ಜವಾಬ್ದಾರಿ ಮಹಿಳೆಯರ ಹಾಗೂ ಹಿರಿಯರ ಮೇಲೆ ಬಿದ್ದಿದೆ. ನೀರಾವರಿ ಸಂಪನ್ಮೂಲಗಳ ಕೊರತೆ ಹಾಗೂ ಇತರ ಸ್ಥಳೀಯ ನೀರಿನ ಸೆಲೆಗಳು ಬತ್ತಿ ಹೋಗಿರುವುದರ ಪರಿಣಾಮವಾಗಿ ಪರ್ವತ ಪ್ರದೇಶಗಳ ಜನರ ನೀರಿನ ಕೊರತೆ ಸಂಕಷ್ಟ ಇನ್ನಷ್ಟು ತೀವ್ರಗೊಂಡಿದೆ. ಸಾಂಪ್ರದಾಯಿಕ ಬೆಳೆಗಳ ಬದಲಾಗಿ ನಗದು ಬೆಳೆಗಳನ್ನು ಬೆಳೆಸುವುದರಿಂದ ಪರ್ವತ ಪ್ರದೇಶದ ಕೃಷಿ ವೈವಿಧ್ಯ ಕ್ಷೀಣಿಸಿದೆ. ಇದು ಜನರ ಪೌಷ್ಟಿಕ ಆಹಾರದ ಅಭದ್ರತೆಯನ್ನು ಹೆಚ್ಚಿಸಿದೆ.

ಇಂತಹ ಪರಿಸ್ಥಿತಿ ಇರುವಾಗ ಸರಕಾರದ, ನೀತಿ ನಿರೂಪಕರ, ಸ್ಥಳೀಯರ ಹಾಗೂ ಅನ್ಯರ ಪಾತ್ರವೇನು?
ಜೀವನೋಪಾಯ ಅವಕಾಶಗಳನ್ನು ಹೆಚ್ಚಿಸಲು, ಬಲಪಡಿಸಲು ಪರ್ವತ ಪ್ರದೇಶ ನಿರ್ದಿಷ್ಟವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಜೈವಿಕ/ಸಾವಯವ ಕೃಷಿ ವಿಧಾನಗಳನ್ನು ಪ್ರೋತ್ಸಾಹಿಸಿ, ಮಾರುಕಟ್ಟೆ ವ್ಯವಸ್ಥೆ ಹಾಗೂ ಮೂಲ ಚೌಕಟ್ಟನ್ನು ಬಲಪಡಿಸಬೇಕು. ಪ್ರದೇಶ-ನಿರ್ದಿಷ್ಟ ಜಲ ಭದ್ರತೆ ಹಾಗೂ ಪರಿಶುದ್ಧವಾದ ಇಂಧನ ಪೂರೈಕೆಯಾಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಈ ಎಲ್ಲ ಕಾರ್ಯಕ್ರಮಗಳಲ್ಲಿ ಜನರ, ವಿಶೇಷವಾಗಿ ಮಹಿಳೆಯರ ಪಾತ್ರವನ್ನು ಕಡೆಗಣಿಸಕೂಡದು. ಪ್ರಮುಖವಾಗಿ ಪಾರಂಪರಿಕ ಜ್ಞಾನ ಭಂಡಾರದ ಸಂರಕ್ಷಕರಾಗಿರುವ ಗಿರಿಜನರನ್ನು ನೀತಿ ನಿರೂಪಣೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಗಳನ್ನಾಗಿ ಮಾಡುವುದು ಬಹಳ ಮುಖ್ಯ.

ಹಿಮಾಲಯ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದಕ್ಕಾಗಿ ಉತ್ತರಾಖಂಡ ಸರಕಾರ 2014ರಲ್ಲಿ ಸೆಪ್ಟಂಬರ್ 9ರಂದು ‘ಹಿಮಾಲಯ ದಿವಸ’ ಎಂದು ಘೋಷಿಸಿತ್ತು. ಪರ್ವತ ಶ್ರೇಣಿಗಳಲ್ಲಿ ಬದುಕುವ ಜನರಿಗೆ ‘ಹಿಮಾಲಯ’ ಎಂಬ ಶಬ್ದ ಕೇವಲ ಪರ್ವತವಷ್ಟೇ ಅಲ್ಲ; ಅದು ಅವರ ಪಾಲಿಗೆ ಸರ್ವಸ್ವ; ಪಹಾಡ್ (ಪರ್ವತ), ಜಲ್ (ನೀರು), ಜಮೀನ್ (ಭೂಮಿ), ಜೀವ್‌ಜಂತು (ಜೀವ ಸಂಕುಲ), ಜಡಿ-ಬೂಟಿ (ಬೇರುಗಳು ಹಾಗೂ ಪೊದೆಗಳು) ಹಾಗೂ ರೋಜಿ-ರೋಟಿ (ದೈನಂದಿನ ಸಂಪಾದನೆ). ನಾವು, ಹೊರಗಿನವರಾಗಿ ಪರ್ವತಗಳನ್ನು ಜನರಿಂದ ದೂರವಾಗಿಸಿದ್ದೇವೆ; ಜನರನ್ನು ಸಂಪನ್ಮೂಲಗಳಿಂದ ದೂರ ಮಾಡಿದ್ದೇವೆ; ಸಂಪನ್ಮೂಲಗಳನ್ನು ಅವರ ಜೀವನೋಪಾಯದಿಂದ ದೂರ ಮಾಡಿದ್ದೇವೆ.

‘ಹಿಮಾಲಯ ದಿವಸ’ದಂದು ಭಿತ್ತಿ ಚಿತ್ರಗಳನ್ನು ಹಾಗೂ ನೀತಿ ಚೌಕಟ್ಟನ್ನು ಬಿಡುಗಡೆ ಮಾಡಲಾಗುತ್ತದೆ; ರ್ಯಾಲಿಗಳನ್ನು ನಡೆಸಲಾಗುತ್ತದೆ ಮತ್ತು ಜೆಸಿಬಿ ಯಂತ್ರಗಳ ಗದ್ದಲದ ನಡುವೆ ‘‘ಹಿಮಾಲಯ ಬಚಾವೋ’’ ಘೋಷಣೆಗಳನ್ನು ಕೂಗಲಾಗುತ್ತಿದೆ. ಈ ಗದ್ದಲದ ನಡುವೆಯೇ ಪರ್ವತ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ನಾವು ಒಂದು ಕ್ಷಣ ನಿಂತು ವಿರಮಿಸಿ ಧ್ಯಾನಿಸಬೇಕು. ಲೇಖಕ ಸ್ಟೀವನ್ ಆಲ್ಟರ್ ಹೇಳಿದ ಹಾಗೆ ನಾವು ಹಿಮಾಲಯ ಪರ್ವತವನ್ನು ಪವಿತ್ರ ಹಾಗೂ ಭವ್ಯ ಪರ್ವತ ಶ್ರೇಣಿ ಎಂದು ಪರಿಗಣಿಸಬೇಕಾಗಿದೆ.


ಕೃಪೆ: thehindu

(ಲೇಖಕರು ಡೆಹ್ರಾಡೂನ್‌ನಲ್ಲಿರುವ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಜೂನಿಯರ್ ರಿಸರ್ಚ್ ಫೆಲೊ ಆಗಿದ್ದಾರೆ 

Writer - ಜುನೋ ನೇಗಿ

contributor

Editor - ಜುನೋ ನೇಗಿ

contributor

Similar News