ಅರಮನೆಗೆ ಆಗಮಿಸಿದ ಗಜಪಡೆಗಳಿಗೆ ಸ್ವಾಗತ ಕೋರಿದ ಸಚಿವ ಸೋಮಶೇಖರ್
ಮೈಸೂರು,ಅ.2: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದು ಅರಮನೆಗೆ ಆಗಮಿಸಿದ ಗಜಪಡೆಗಳನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯಕ್ತವಾಗಿ ಬರಮಾಡಿಕೊಂಡು ಸ್ವಾಗತ ಕೋರಿದರು.
ನಗರದ ಅರಮನೆಯ ಪೂರ್ವ ಧಿಕ್ಕಿನ ಜಯಮಾರ್ತಾಂಡ ಮಹಾದ್ವಾರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆನೆಗಳಿಗೆ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ಧೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಈ ಬಾರಿ ನಡೆಯುವ ದಸರಾ ಕಾರ್ಯಕ್ರಮಗಳಿಗೆ ಸ್ವಾಗತ ಕೋರಿದರು.
ಬಳಿಕ ಪೊಲೀಸ್ ಇಲಾಖೆ ವತಿಯಿಂದ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಗಾರ್ಡ್ ಆಫ್ ಆನರ್ ಸಲ್ಲಿಸಲಾಯಿತು. ಅಲ್ಲಿಂದ ಮಧ್ಯಾಹ್ನ 12.45 ರ ಸುಮಾರಿಗೆ ನಾದಸ್ವರ ಹಾಗೂ ಪೂರ್ಣಕುಂಭದ ಮೂಲಕ ಅರಮನೆಯ ಆನೆ ಬಾಗಿಲಿಗೆ ಗಜಪಡೆಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿಂದ ಗಜಪಡೆಗಳಿಗೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ನಂತರ ಅರಣ್ಯ ಇಲಾಖೆಯ ವತಿಯಿಂದ ಜಿಲ್ಲಾಡಳಿತದ ವಶಕ್ಕೆ ಆನೆಗಳನ್ನು ಒಪ್ಪಿಸಲಾಯಿತು. ಹಾಗೆ ದಸರಾ ಮುಗಿಯುವವರೆಗೂ ಅರಮನೆಯಲ್ಲೇ ಆನೆಗಳ ವಾಸ್ತವ್ಯಕ್ಕೆ ಅರಮನೆ ಮಂಡಳಿ ವತಿಯಿಂದ ವ್ಯವಸ್ಥೆ ಮಾಡಲಾಗಿದ್ದು, ಮಾವುತರು ಮತ್ತು ಕಾವಾಡಿಗಳಿಗೆ ಅಗತ್ಯ ವಸ್ತುಗಳ ಕಿಟ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಮೇಯರ್ ತಸ್ನೀಂ, ಜಿ.ಪಂ.ಅಧ್ಯಕ್ಷೆ ಪರಿಮಳಾ ಶ್ಯಾಮ್, ತಾ.ಪಂ.ಅಧ್ಯಕ್ಷೆ ನಾಗರತ್ನ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿ.ಪಂ.ಸಿಇಓ ಡಿ.ಭಾರತಿ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.