ಕುತೂಹಲ ಸೃಷ್ಟಿಸಿದ ಕುಮಾರಸ್ವಾಮಿ-ಜಗದೀಶ್ ಶೆಟ್ಟರ್ ಭೇಟಿ

Update: 2020-10-03 14:33 GMT

ಬೆಂಗಳೂರು, ಅ. 3: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶನಿವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ಉಭಯ ನಾಯಕರು ಭೇಟಿ ಸಮಾಲೋಚನೆ ನಡೆಸಿದ್ದು, 'ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಬದಲಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ರೈತರ ಭೂ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸಿದ್ದು, ಇದರಲ್ಲಿ ಯಾವುದೇ ವಿಶೇಷವಿಲ್ಲ' ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮತ್ತೊಮ್ಮೆ ಸರ್ವೆಗೆ ಸೂಚನೆ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಉದ್ದೇಶಿತ ಕೈಗಾರಿಕಾ ಪ್ರದೇಶ ಅಭಿವೃದ್ದಿಗೆ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಮತ್ತೊಮ್ಮೆ ಸರ್ವೇ ಮಾಡಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ದಿಗೆ ಭೂಸ್ವಾಧೀಯ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲವೊಂದು ಅಭಿವೃದ್ದಿ ಹೊಂದಿರುವ ತೋಟಗಳನ್ನು ನಮೂದಿಸಲಾಗಿದೆ. ಇದನ್ನು ಕೈಬಿಟ್ಟು ಒಣಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಈ ಭಾಗದಲ್ಲಿ ಕೈಗಾರಿಕೆಗಳ ಬರುವ ಅಗತ್ಯತೆ ಇದೆ. ಆದರೆ, ಕೃಷಿಯಲ್ಲಿ ಅಭಿವೃದ್ದಿ ಹೊಂದಿರುವ ನೀರಾವರಿ ಜಮೀನನ್ನು ಈ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ತೋಟಗಳು ಹಾಗೂ ನೀರಾವರಿ ಸೌಲಭ್ಯದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಜಮೀನಿನ ಸ್ವಾಧೀನ ಪ್ರಕ್ರಿಯೆ ಸರಿಯಲ್ಲ. ಆ ಜಾಗವನ್ನು ಬಿಟ್ಟು ಒಣ ಪ್ರದೇಶದ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆ ಭಾಗದ ರೈತರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಬೇಕು ಮತ್ತು ಇನ್ನೊಮ್ಮೆ ಸರ್ವೇ ಕಾರ್ಯವನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ನಾಗಮಂಗಲ ಶಾಸಕ ಸುರೇಶ್ ಗೌಡ, ಮಾಗಡಿ ಶಾಸಕ ಎ.ಮಂಜುನಾಥ್ ಅವರ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಅವಕಾಶ ಇರುವ ಪ್ರದೇಶಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಅಲ್ಲದೆ, ಅಧಿಕಾರಿಗಳನ್ನು ಸರ್ವೇ ಕಾರ್ಯಕ್ಕೆ ಕಳುಹಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶೆಟ್ಟರ್, ಸ್ಥಳದಲ್ಲೆ ಅಧಿಕಾರಿಗಳಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಪರಿಷತ್ ಸದಸ್ಯ ಅಪ್ಪಾಜಿಗೌಡ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಐಎಡಿಬಿ ಸಿಇಓ ಶಿವಶಂಕರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News