ಶಿರಾ ಉಪಚುನಾವಣೆ: ಟಿಕೆಟ್ ಆಕಾಂಕ್ಷಿ ಡಾ.ರಾಜೇಶ್‍ ಗೌಡ ಬಿಜೆಪಿಗೆ ಸೇರ್ಪಡೆ

Update: 2020-10-03 11:56 GMT

ಬೆಂಗಳೂರು, ಅ. 3: ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪನವರ ಪುತ್ರ ಡಾ.ರಾಜೇಶ್‍ ಗೌಡ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಡಾ.ರಾಜೇಶ್‍ ಗೌಡ ಬಿಜೆಪಿ ಸೇರ್ಪಡೆಯಾದರು. ವೈದ್ಯರಾಗಿರುವ ಡಾ.ರಾಜೇಶ್‍ ಗೌಡ ಅವರನ್ನು ಶಿರಾ ಉಪಚುನಾವಣೆಗೆ ಕಣಕ್ಕಿಳಿಸಲು ಬಿಜೆಪಿ ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿತ್ತು. ಶಿರಾ ಉಪಚುನಾವಣೆಗೆ ರಾಜೇಶ್‍ ಗೌಡ ಅವರ ಹೆಸರನ್ನೆ ಶಿಫಾರಸ್ಸು ಮಾಡಿ ವರಿಷ್ಠರ ಅನುಮೋದನೆಗೆ ಕಳುಹಿಸಲಾಗಿತ್ತು ಎಂದು ಗೊತ್ತಾಗಿದೆ.

ಉಪಚುನಾವಣೆಗೆ ಬಿಜೆಪಿ ಟಿಕೆಟ್ ಸಿಗುವುದು ಖಾತ್ರಿಯಾಗುತ್ತಿದ್ದಂತೆಯೇ ಡಾ.ರಾಜೇಶ್‍ ಗೌಡ ಬಿಜೆಪಿಗೆ ಸೇರಿದರು. ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪನವರ ಪುತ್ರ ಡಾ.ರಾಜೇಶ್‍ ಗೌಡ ಕ್ಷೇತ್ರದಲ್ಲಿ ಉತ್ತಮ ಜನಸಂಪರ್ಕ ಹೊಂದಿದ್ದು, ಕಡಿಮೆ ವೆಚ್ಚದಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಮೂಲಕ ಜನಪ್ರಿಯ ವೈದ್ಯರಾಗಿ ಹೆಸರು ಮಾಡಿದ್ದಾರೆ. ಜತೆಗೆ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಬಿಜೆಪಿ ಎಲ್ಲವನ್ನೂ ಅಳೆದು ತೂಗಿಯೇ ರಾಜೇಶ್ ಗೌಡ ಹೆಸರನ್ನು ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ.

ರಾಜೇಶ್‍ ಗೌಡ ಕಾಂಗ್ರೆಸ್ ಪಕ್ಷದ ಟಿಕೆಟ್‍ಗೂ ಪ್ರಯತ್ನ ನಡೆಸಿದರಾದರೂ ಕಾಂಗ್ರೆಸ್ ಪಕ್ಷ ಈಗಾಗಲೇ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನೆ ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದೆ. ಹೀಗಾಗಿ ಡಾ. ರಾಜೇಶ್‍ ಗೌಡ ಬಿಜೆಪಿಯಿಂದ ಕಣಕ್ಕಿಳಿಯಲು ಬಯಸಿ, ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಟಿಕೆಟ್‍ಗೆ ಮನವಿ ಮಾಡಿದ್ದರು. ಇದಕ್ಕೆ ರಾಜ್ಯ ಮುಖಂಡರು ಸಮ್ಮತಿಸಿದ್ದು, ಪಕ್ಷದ ವರಿಷ್ಠರಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಅಸಮಾಧಾನ: ಶಿರಾ ಕ್ಷೇತ್ರದ ಉಪಚುನಾವಣಾ ಕಣಕ್ಕೆ ವೈದ್ಯ ಡಾ.ರಾಜೇಶ್‍ ಗೌಡ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸುತ್ತಿದ್ದಂತೆಯೇ ಸ್ಥಳೀಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ಥಳೀಯ ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ ನಾವು ಕೆಲಸ ಮಾಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News