ಡಿ.ಕೆ.ರವಿ ಪತ್ನಿಗೆ ಟಿಕೆಟ್ ನೀಡುವಂತೆ ಶಾಸಕರು, ಮಾಜಿ ಸಂಸದರಿಂದ ಶಿಫಾರಸು: ಡಿ.ಕೆ.ಶಿವಕುಮಾರ್

Update: 2020-10-03 13:15 GMT

ಧಾರವಾಡ, ಅ.3: ನೆರೆ ಸಂತ್ರಸ್ತರ ಕುರಿತು ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು, ರಾಜ್ಯ ಸರಕಾರಕ್ಕೆ ಕಣ್ಣು-ಕಿವಿಗಳೇ ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪಾದಿಸಿದ್ದಾರೆ.

ಶನಿವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯವಿಲ್ಲದ ಸರಕಾರ ನೆರೆ ಸಂತ್ರಸ್ತರನ್ನು ನಿರ್ಲಕ್ಷ್ಯಿಸಿದೆ. ಸಂತ್ರಸ್ತರ ನೋವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಬೇಕಿತ್ತು. ಆದರೆ, ಅವರು ರಾಜಧಾನಿಯಲ್ಲಿಯೇ ಕುಳಿತು ಮಾತನಾಡುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಈ ವರ್ಷ ದೇವರೇ ಗತಿ’ ಎಂದು ಕೈಚೆಲ್ಲಿದ್ದಾರೆ. ಹೀಗಾದರೆ ದೇಶದ ಜನರ ಪಾಡೇನು?’ ಎಂದು ಪ್ರಶ್ನಿಸಿದರು.

ಡಿ.ಕೆ.ರವಿ ಪತ್ನಿಗೆ ಟಿಕೆಟ್ ?: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಐಎಎಸ್ ಅಧಿಕಾರಿ, ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾರಿಗೆ ಪಕ್ಷದ ಟಿಕೆಟ್ ನೀಡುವಂತೆ ಶಾಸಕರು, ಮಾಜಿ ಸಂಸದರು ಸೇರಿ ಹಲವರು ಶಿಫಾರಸು ಮಾಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಧಾರವಾಡ ಭೇಟಿ ಬಳಿಕ ಬೆಳಗಾವಿಗೆ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ.ರವಿ ಅವರ ಪತ್ನಿಯ ತಂದೆ ಈ ಹಿಂದೆ ನಮ್ಮ ಪಕ್ಷದಲ್ಲಿದ್ದರು. ಅವರು ಬಿಟ್ಟು ಹೋಗಿದ್ದರು. ಇದೀಗ ನಮ್ಮ ಪಕ್ಷದಲ್ಲಿದ್ದ ಕೆಲವರು ನೊಂದ ಹೆಣ್ಣು ಮಗಳಿಗೆ ಟಿಕೆಟ್ ಕೊಡಲು ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ. ಆದರೆ, ಈ ಕುರಿತು ನಾವು ಇನ್ನೂ ಚರ್ಚೆ ಮಾಡಿಲ್ಲ. ಆ ಕ್ಷೇತ್ರದಲ್ಲಿ ಏಳೆಂಟು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದರು.

ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆ ಟಿಕೆಟ್ ವಿಷಯದಲ್ಲಿ ಚರ್ಚಿಸಲು ಹಿರಿಯರಾದ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಅವರು ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಶಿಫಾರಸು ಮಾಡುತ್ತಾರೆ. ಅಭ್ಯರ್ಥಿ ಆಯ್ಕೆಗೆ ಸಿದ್ದರಾಮಯ್ಯ ಸೇರಿ ಮುಖಂಡೆರೆಲ್ಲರೂ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಆರ್. ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದಲ್ಲಿ ಪಕ್ಷಕ್ಷೆ ಸೇರಿಸಿಕೊಳ್ಳುವಿರಾ ಎಂಬ ಪ್ರಶ್ನೆಗೆ, ಪಕ್ಷ ಸೇರಲು ಯಾರು ಬೇಕಾದರೂ ಅರ್ಜಿ ಹಾಕಬಹುದು. ಅರ್ಜಿಗಳೆಲ್ಲವೂ ಬರಲಿ, ನಂತರ ತೀರ್ಮಾನಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಶಿರಾ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಅವರು ಸೂಚಿಸಿದ ಅಭ್ಯರ್ಥಿಯನ್ನು 2–3 ದಿನಗಳಲ್ಲಿ ಹೈಕಮಾಂಡ್‍ಗೆ ಶಿಫಾರಸು ಮಾಡುತ್ತೇನೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಇನ್ನೂ ಚರ್ಚಿಸಿಲ್ಲ. ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದರು.

ಪದವೀಧರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಉಪಚುನಾವಣೆ ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮವಾಗಬೇಕಿದೆ. ಬಿಜೆಪಿ ಕಡೆ ಸರಕಾರವೇ ಇದೆ. ಹೀಗಾಗಿ ಅವರು ಜೋರಾಗಿಯೇ ಚುನಾವಣೆ ನಡೆಸುತ್ತಾರೆ. ವಿರೋಧ ಪಕ್ಷದಲ್ಲಿರುವ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು.

ಬೇರಾರೂ ಡ್ರಗ್ಸ್ ತಗೊಂಡಿಲ್ವಾ?: ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ನಿರೂಪಕಿ ಅನುಶ್ರೀ ಸೇರಿ ಹಲವರೊಂದಿಗೆ ಕೆಲವು ಪ್ರಭಾವಿಗಳ ನಂಟಿದೆ ಎನ್ನಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಶೆ, ಪಶೆ ಎಂಬುವುದು ನನಗೆ ಅರ್ಥವಾಗಲ್ಲ. ಚಲನಚಿತ್ರ ನಟಿಯರು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ಲವೇ? ಟಿವಿಗಳಲ್ಲಿ ಮಜರಂಜನಾ ಉದ್ಯಮದಲ್ಲಿರುವವರನ್ನು ಬಿಟ್ಟು ಬೇರೆ ಯಾರನ್ನು ಹೈಲೆಟ್ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News