ಅನುಶ್ರೀಗೆ ರಕ್ಷಣೆ ನೀಡುತ್ತಿರುವ 'ಆ ಮಾಜಿ ಮುಖ್ಯಮಂತ್ರಿ'ಯ ಹೆಸರು ಬಹಿರಂಗಪಡಿಸಿ: ಕುಮಾರಸ್ವಾಮಿ ಒತ್ತಾಯ
ಬೆಂಗಳೂರು, ಅ. 3: ಮಾದಕ ವಸ್ತುಗಳ (ಡ್ರಗ್ಸ್) ಪ್ರಕರಣದಲ್ಲಿ ಟಿವಿ ನಿರೂಪಕಿ `ಅನುಶ್ರೀ ಅವರ ರಕ್ಷಣೆಯಲ್ಲಿ ಮಾಜಿ ಸಿಎಂ ಒಬ್ಬರ ಕೈವಾಡವಿದೆ' ಎಂದು ಸುದ್ದಿ ಮಾಧ್ಯಮಗಳು ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸುವುದು ಸರಿಯಲ್ಲ. ಇಂತಹ ಕಲ್ಪಿತ, ಸುಳ್ಳು ಸುದ್ದಿಗಳನ್ನು ಬಿತ್ತರಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾದಕ ವಸ್ತುಗಳ ಪ್ರಕರಣದಲ್ಲಿ ರಾಜ್ಯ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಪೋಲಕಲ್ಪಿತ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಹರಿಯಬಿಡುತ್ತಿದೆ ಎಂಬ ಸಂಶಯವಿದೆ. ಅಲ್ಲದೆ, ಉಪ ಚುನಾವಣೆ ಸಂದರ್ಭದಲ್ಲಿ ಬೇರೊಬ್ಬರ ಮೇಲೆ ವಿನಾ ಕಾರಣ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಅನುಶ್ರೀ ರಕ್ಷಣೆಗೆ ಮುಂದಾಗಿರುವ ಆ ಮಾಜಿ ಮುಖ್ಯಮಂತ್ರಿ ಯಾರು? ಎಂಬ ಬಗ್ಗೆ ಸರಕಾರ ಕೂಡಲೇ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಮಾದಕ ವಸ್ತುಗಳ ಜಾಲದ ಬಗ್ಗೆ ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣ ಸಂಬಂಧ ನಿರೂಪಕಿ ಅನುಶ್ರೀಗೆ ನೋಟಿಸ್ ನೀಡಿದ ವೇಳೆ ಮೂರು ರಾಜಕೀಯ ಪಕ್ಷಗಳ ನಾಯಕರಿಂದ ಒತ್ತಡ ಹೇರಲು ಆಕೆ ಪ್ರಯತ್ನಿಸಿದ್ದಳು. ಈ ಬಗ್ಗೆ ಆಕೆಯ ಮೊಬೈಲ್ ಕಾಲರ್ ಲಿಸ್ಟ್ ನಲ್ಲಿ ಲಭ್ಯವಾಗಿರುವ ಮಾಹಿತಿ ಬಗ್ಗೆ ಸಿಸಿಬಿ ಅಧಿಕಾರಿಗಳೇ ವಿಷಯ ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ. ಆದರೆ, ಆ ಮಾಜಿ ಸಿಎಂ ಯಾರು? ಎಂಬುದನ್ನು ಸರಕಾರ ಸ್ಪಷ್ಟನೆ ನೀಡಬೇಕು ಎಂದು ಕೋರಿದರು.
ಮಾಧ್ಯಮಗಳ ವರದಿಯ ಸತ್ಯಾಸತ್ಯತೆ ಬಹಿರಂಗವಾಗಬೇಕು. ಇಲ್ಲವಾದರೆ ಕಪೋಲಕಲ್ಪಿತ ಸುದ್ದಿ ಬಿತ್ತರಿಸಿದ ಮಾಧ್ಯಮ ಪ್ರತಿನಿಧಿ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಎಸ್ಸೆಂ ಕೃಷ್ಣ ಹಾಗೂ ನಾನು ಸೇರಿ ರಾಜ್ಯದಲ್ಲಿ ಒಟ್ಟು ಆರು ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದೇವೆ. ಆ ಪೈಕಿ ಅನುಶ್ರೀ ರಕ್ಷಣೆಯಲ್ಲಿ ಯಾರ ಕೈವಾಡ ಎಂಬುದು ಸ್ಪಷ್ಟವಾಗಬೇಕು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಡ್ರಗ್ಸ್ ಪ್ರಕರಣ ತನಿಖಾ ಹಂತದಲ್ಲಿ ಪ್ರತಿದಿನ ಒಂದೊಂದು ಹೆಸರು ಹೊರ ಬರುತ್ತಿದೆ. ಆ ಮೂಲಕ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆಯೇ? ಅಥವಾ ಸರಕಾರ ಮಾಡುತ್ತಿದೆಯೇ? ಎಂಬುದು ಗೊತ್ತಾಗಬೇಕು ಎಂದ ಕುಮಾರಸ್ವಾಮಿ, ಯಾವ ಆಧಾರದ ಮೇಲೆ ಮಾಜಿ ಸಿಎಂ ಎಂಬುದು ಪ್ರಸ್ತಾಪವಾಗಿದೆ ಎಂಬುದು ಬಹಿರಂಗವಾಗಬೇಕು. ಸಿಸಿಬಿ ತನಿಖಾಧಿಕಾರಿ ಶಿವಪ್ರಕಾಶ್ ನಾಯಕ್ ಎಂಬವರೇ ಮಾಹಿತಿ ಬಹಿರಂಗಪಡಿಸಿದ್ದಾರೆಂದು ಹೇಳಲಾಗುತ್ತಿದೆ. ಆದುದರಿಂದ ನಾನು ಈ ಸಂಬಂಧ ಸಿಎಂ ಮತ್ತು ಗೃಹ ಸಚಿವರಿಗೆ ಪತ್ರವನ್ನು ಬರೆಯುತ್ತಿದ್ದೇನೆ ಎಂದರು.
ಉಪ ಚುನಾವಣೆ ಸಂದರ್ಭದಲ್ಲಿ ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸುವುದರಿಂದ ರಾಜ್ಯದ ಜನತೆ ಮಾಜಿ ಮುಖ್ಯಮಂತ್ರಿಗಳ ಮೇಲೆ ಸಂಶಯಪಡುತ್ತಾರೆ. ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ನಾಯಕರ ಮಕ್ಕಳಿದ್ದಾರೆಂದು ಹೇಳಲಾಗುತ್ತಿದೆ. ಇದು ಮಾಜಿ ಸಿಎಂಗಳಾಗಿರುವ ನಮಗೆಲ್ಲರಿಗೂ ತೀವ್ರ ಮುಜುಗರ ಸೃಷ್ಟಿಸಿದೆ. ಹೀಗಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವ ಮಾಜಿ ಸಿಎಂ ಯಾರು? ಎಂದು ಗೊತ್ತಾಗಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.
ನಾನು ಈ ಹಿಂದೆಯೇ ಹೇಳಿದಂತೆ ಡ್ರಗ್ಸ್ ಪ್ರಕರಣದ `ತನಿಖೆ ಹಳ್ಳ ಹಿಡಿಯಲಿದೆ' ಎಂದು ಹೇಳಿದ್ದೆ. ರಾಜ್ಯದಲ್ಲಿ ಇದೀಗ ಅದೇ ಆಗುತ್ತಿದೆ. ಸರಕಾರ ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬದಲಿಗೆ ಸುಖ ಸುಮ್ಮನೆ ದಿನಕ್ಕೊಬ್ಬರ ಹೆಸರನ್ನು ಹೇಳುತ್ತಾ ರಾಜ್ಯದ ಜನತೆ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ ಕುಮಾರಸ್ವಾಮಿ, ಡ್ರಗ್ಸ್ ಪ್ರಕರಣದ ಮೂಲ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.