ನದಿಯಲ್ಲಿ ಈಜಾಡಲು ತೆರಳಿದ ಯುವಕರ ತಂಡ: ನೀರಿನಲ್ಲಿ ಮುಳುಗಿ ಇಬ್ಬರು ಮೃತ್ಯು
ಶಿವಮೊಗ್ಗ, ಅ.3: ಸೈಕ್ಲಿಂಗ್ ಮಾಡಲು ಬಂದು, ಭದ್ರಾ ನದಿಗೆ ಈಜಾಡಲು ಇಳಿದಿದ್ದ ಯುವಕರ ತಂಡದಲ್ಲಿ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಭದ್ರಾವತಿ ದೊಡ್ಡ ಗೋಪೇನಹಳ್ಳಿ ಬಳಿ ಗೋಂಧಿ ಚಾನಲ್ ಆಂಜನೇಯ ಬಂಡೆ ಸಮೀಪ ನಡೆದಿದೆ.
ಮೃತರನ್ನು ಜನ್ನಾಪುರದ ರಾಜೇಶ್ (38) ಹಾಗೂ ಮನೋಜ್ (17) ಎಂದು ಗುರುತಿಸಲಾಗಿದೆ. ಇಬ್ಬರ ಶವವನ್ನು ನೀರಿನಿಂದ ಮೇಲಕ್ಕೆ ತೆಗೆಯಲಾಗಿದೆ.
ಒಟ್ಟು 9 ಯುವಕರು ಸೈಕ್ಲಿಂಗ್ ಗೆ ತೆರಳಿದ್ದರು. ಎಲ್ಲರೂ ನೀರಿನಲ್ಲಿ ಈಜಲು ಇಳಿದಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಸುಳಿ ಇದ್ದುದರಿಂದ ಮನೋಜ್ ಮುಳುಗುವ ಹಂತಕ್ಕೆ ಬಂದಿದ್ದು, ಸಹಾಯಕ್ಕಾಗಿ ಕೂಗಿದ್ದಾನೆ. ಈ ವೇಳೆ ರಕ್ಷಣೆಗೆ ಧಾವಿಸಿ, ಬಟ್ಟೆ ಕಟ್ಟಿ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ರಕ್ಷಿಸಲು ಸಾಧ್ಯವಾಗದೇ ರಾಜೇಶ್ ಎಂಬಾತ ನೀರಿನ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ನೀರಿನಲ್ಲಿ ಸಿಲುಕಿದ್ದ 13 ವರ್ಷದ ಕಾರ್ತಿಕ್ ಎಂಬಾತನನ್ನು ರಕ್ಷಿಸಲಾಗಿದೆ.
ಘಟನೆ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.