10ನೆ ದಿನಕ್ಕೆ ಕಾಲಿಟ್ಟ ವೈದ್ಯಕೀಯ ನೌಕರರ ಮುಷ್ಕರ
ಬೆಂಗಳೂರು, ಅ.3: ಕಳೆದ ಹತ್ತು ದಿನಗಳಿಂದ ಕೆಲಸ ಸ್ಥಗಿತ ಹೋರಾಟ ಮುಷ್ಕರ ನಡೆಸುತ್ತಿರುವ ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.
ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ನೌಕರರು ಕಳೆದ ಹತ್ತು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ತಮ್ಮ ನೌಕರಿ ಖಾಯಮಾತಿ ಹಾಗೂ ವೇತನವನ್ನು ನೇರ ಇಲಾಖೆಯ ಮೂಲಕ ನೀಡುವಂತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮುಖ್ಯಮಂತ್ರಿಗೆ ಸೆ.28ರಂದು ಪತ್ರ ಬರೆದು ಸಾರ್ವಜನಿಕರ ಆರೋಗ್ಯ ಹಾಗೂ ಚಿಕಿತ್ಸೆ ಹಿತ ದೃಷ್ಟಿಯಿಂದ ನೌಕರರ ಜೀವನ ಮಟ್ಟ ಸುಧಾರಿಸಲು ಮುಖ್ಯಮಂತ್ರಿ ಮದ್ಯ ಪ್ರವೇಶಿಸಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಮುಂದಾಬೇಕೆಂದು ಕೋರಿದ್ದರು.
ಸಾರ್ವಜನಿಕ ಆಸ್ಪತ್ರೆ ಹಾಗೂ ಕೋವಿಡ್-19 ಆರೈಕೆ ಕೇಂದ್ರಗಳಲ್ಲಿ ಸಿಬ್ಬಂದಿಗಳು ಇಲ್ಲದೆ ರೋಗಿಗಳು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸರಕಾರ ನೇಮಿಸಿದ್ದ ಸಮಿತಿ ವರದಿ ನೀಡುವ ಗಡುವು ಮುಗಿದಿದ್ದು ಈ ಹಿನ್ನೆಲೆಯಲ್ಲಿ ನೌಕರರು ಕೆಲಸ ಸ್ಥಗಿತ ಮಾಡಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದ್ದರು.ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಸಚಿವರಿಗೆ ಬೇಡಿಕೆಗಳನ್ನು ಈಡೇರಿಸುವಂತೆ ನಿರ್ದೇಶನ ನೀಡಬೇಕೆಂದು ಆಯನೂರು ಮಂಜುನಾಥ್ ಮನವಿ ಮಾಡಿದ್ದರು.
ಈ ಸಂಬಂಧ ಅ.2ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ತಮ್ಮ ವಿಶೇಷ ಕರ್ತವ್ಯಾಧಿಕಾರಿಗಳ ಮೂಲಕ ಪ್ರತ್ಯೇಕವಾಗಿ ಪತ್ರ ಬರೆದು ಮುಂದಿನ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಎಚ್.ಯಾಮೋಜಿ, ಸ್ವತಃ ಮುಖ್ಯಮಂತ್ರಿ ತಮ್ಮ ಹೋರಾಟವನ್ನು ಗಮನಿಸಿ ಸಂಬಂಧ ಪಟ್ಟ ಸಚಿವರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ. ಇದು ನಮ್ಮ ಹೋರಾಟಕ್ಕೆ ಸಂದ ಮೊದಲ ಹಂತದ ಜಯವಾಗಿದೆ. ಇನ್ನಾದರು ಸಂಬಂಧಪಟ್ಟ ಸಚಿವರು ತಮ್ಮ ಜೊತೆ ಮಾತುಕತೆ ನಡೆಸಬೇಕು. ನೌಕರರು ಯಾವುದೇ ಗಾಳಿ ಸುದ್ದಿಗೆ ತಲೆಕೆಡಿಸಿಕೊಳ್ಳದೆ ಸಂಘದ ಅಧಿಕೃತ ಮಾಹಿತಿಯನ್ನು ಮಾತ್ರ ಪಾಲನೆ ಮಾಡಬೇಕು ಎಂದರು ಕೋರಿದ್ದಾರೆ.
ಅಧಿಕಾರಿಗಳು, ನೌಕರರ ಮೇಲೆ ತುರ್ತು ಪರಿಸ್ಥಿತಿಯ ವಾತಾವರಣವನ್ನು ಹೇರುತ್ತಿದ್ದಾರೆ. ಕೆಲಸದಿಂದ ತೆಗೆದು ಹಾಕುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಸೌಜನ್ಯಕ್ಕೂ ನೌಕರರನ್ನು ಕರೆದು ಮಾತನಾಡಿಸುವ ವ್ಯವದಾನವನ್ನು ಹೊಂದಿಲ್ಲ. ಇಷ್ಟಾದರೂ ಸಚಿವರು ಮಾತುಕತೆಗೆ ತಮ್ಮನ್ನು ಕರೆದು ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ ಎಲ್ಲ ಕಡೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.