ಬಾಬರಿ ಮಸೀದಿ ತನ್ನಷ್ಟಕ್ಕೆ ಬಿತ್ತೇ ?: ಸಾಹಿತಿ ದೇವನೂರ ಮಹಾದೇವ ಪ್ರಶ್ನೆ

Update: 2020-10-03 14:56 GMT

ಮೈಸೂರು,ಅ.3: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲರೂ ನಿರ್ದೋಷಿಗಳು ಎಂದು ತೀರ್ಪು ನೀಡಲಾಗಿದೆ. ಹಾಗಾದರೆ ಮಸೀದಿ ಧ್ವಂಸವಾಗಿದ್ದು ಹೇಗೆ ? ತನಗೆ ತಾನೇ ಬಿತ್ತೆ? ನ್ಯಾಯ ಎಲ್ಲಿದೆ? ಅಡ್ವಾಣಿ ಕೊನೆಗಾಲದಲ್ಲಿ ಖುಷಿ ಕಳೆದುಕೊಂಡಿದ್ದರು. ಇದರಿಂದ ಅವರ ಮನಸ್ಸಿಗೆ ಕೊಂಚ ಸಮಾಧಾನವಾಗಿದೆಯಷ್ಟೆ ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಜನತಂತ್ರ ಪ್ರಯೋಗ ಶಾಲಾ, ಜನ ಸಂಗ್ರಾಮ ಪರಿಷತ್, ಸಿಟಿಜನ್ ಫಾರ್ ಡೆಮಾಕ್ರಸಿ ಮತ್ತಿತರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಸಮುದಾಯಗಳ ಕಡೆಗೆ ಜನಾಂದೋಲನ ಮಹಾ ಮೈತ್ರಿಯ ಉದ್ಘಾಟನಾ ಸಮಾರಂಭದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಬಲಿಯಾದ ಯುವತಿಯ ಶವವನ್ನು ಅವರ ತಾಯಿಯ ಮಾತನ್ನೂ ಕೇಳದೆ ಪೊಲೀಸರು ದಹನ ಮಾಡಿ ಮಾನವ ಕುಲಕ್ಕೆ ಅವಮಾನ ಮಾಡಿದ್ದರೆ. ಅತ್ಯಾಚಾರಕ್ಕೆ ಯಾವ ದಾಖಲೆಯೂ ಸಿಗಬಾರದೆಂದು ಎಲ್ಲರವನ್ನೂ ನಾಶ ಮಾಡಿದ್ದಾರೆ. ಆ ಹುಡುಗಿಯೇ 3 ಜನರ ಹೆಸರು ಹೇಳಿದ್ದಳು. ಇದನ್ನೆಲ್ಲಾ ನೋಡಿದರೆ ದುಃಖವಾಗುತ್ತದೆ ಎಂದರು.

ಇದೇ ವೇಳೆ ರಾಜೇಂದ್ರ ಚೆನ್ನಿ ಅವರ 'ಲೋಕ ವಿಮರ್ಶೆ' ಹಾಗೂ ಸಸಿಕಾಂತ್ ಸೆಂಥಿಲ್ ಅವರ 'ನಾನೇಕೆ ಅಧಿಕಾರ ಕಳೆದುಕೊಂಡೆ' ನಿಗೂಢ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, ''ಶಶಿಕಾಂತ್ ಸೆಂಥಿಲ್ ಅವರು ಅವರೇಕೆ ರಾಜೀನಾಮೆ ನೀಡಿದರು ಎಂಬುದರ ಬಗ್ಗೆ ನಿಗೂಢ ಎಂಬ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಇಂದಿನ ವ್ಯವಸ್ಥೆಯನ್ನು ಬಹಳ ಸೂಚ್ಯವಾಗಿ ವಿವರಿಸಲಾಗಿದೆ. ಈ ಎಲ್ಲಾ ವಿಚಾರವನ್ನೂ ಪುಸ್ತಕದಲ್ಲಿ ಅದ್ಭುತವಾಗಿ ನಿರೂಪಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಆದ ಕಾಯ್ದೆಗಳ ಮಹತ್ವ ನಮಗೆ ಈಗ ತಿಳಿಯುತ್ತಿದೆ. ಕಾಂಗ್ರೆಸ್ ಇದ್ದಾಗ ಅದರ ಬೆಲೆ ನಮಗೆ ತಿಳಿಯಲಿಲ್ಲ. ಈಗಿರುವ ಸರ್ಕಾರ ಎಲ್ಲಾ ಕಾಯ್ದೆಗಳನ್ನೂ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿಗೂ ಮುನ್ನ ಇದ್ದ ಕಾಯ್ದೆಗಳ ಮಹತ್ವ ನಮಗೆ ಈಗ ತಿಳಿಯುತ್ತಿದೆ. ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಂದ ಮನಸ್ಸಿಗೆ ಭಾರೀ ಬೇಸರವಾಗುತ್ತಿದೆ. ಆದ್ದರಿಂದಲೇ ಆರ್ಥಿಕತೆ ಹಿಂದೆ ಹೋಗುತ್ತಿದೆ. ಕಂಪೆನಿಗಳ ಕೈಗೆ ಭಾರತ ಮಾರುವಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ಚಿಂತಕ ಶಿವಸುಂದರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ, ಅಭಿರುಚಿ ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News