×
Ad

ಪ್ರತಿಯೊಬ್ಬರಿಗೂ ಡ್ರಗ್ಸ್ ಅವಶ್ಯಕತೆಯಿದೆ ಎಂದ ಶಾಸಕ ಅಮರೇಗೌಡ ಪಾಟೀಲ್

Update: 2020-10-03 21:52 IST

ಕೊಪ್ಪಳ, ಅ.3: ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಎಂದರೆ ಅದು ನಶೆ ಏರಿಸುವ ವಸ್ತು. ಇದು ಹಿಂದಿನ ರಾಜ ಮಹಾರಾಜರ ಕಾಲದಿಂದಲೇ ಬಂದಿದೆ. ಡ್ರಗ್ಸ್ ನ ಬೇರೆ ಬೇರೆ ವೆರೈಟಿಗಳನ್ನು ಈಗ ಕಂಡು ಹಿಡಿದಿದ್ದಾರೆ. ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನಟಿಯರನ್ನು ಹೆಚ್ಚು ಉಪಯೋಗ ಮಾಡಿದ್ದು ತಪ್ಪು. ಸರಕಾರ ಹಾಗೂ ಮಾಧ್ಯಮ ಇದನ್ನು ಮಾಡಬಾರದಾಗಿತ್ತು ಎಂದು ಹೇಳಿದರು.

ನಟ, ನಟಿಯರು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿದ್ದಾರೆ. ಅವರಿಗೂ ನಾವು ಗೌರವ ಕೊಡಬೇಕು. ಅದರ ಜೊತೆಗೆ ಅವರಿಗೆ ಗೌಪ್ಯವಾಗಿ ಶಿಕ್ಷೆ ಕೊಡಬೇಕು ಎಂದರು.

ನನ್ನನ್ನೂ ಸೇರಿದಂತೆ ಎಲ್ಲ ರಾಜಕಾರಣಿಗಳಿಗೂ ವೈಯಕ್ತಿಕವಾಗಿ ಕೆಲವು ಅಭ್ಯಾಸಗಳಿರುತ್ತವೆ. ಎಲ್ಲೋ ಒಬ್ಬರು ಮಹಾತ್ಮ ಗಾಂಧಿ ಅಂತವರು ಇದ್ದರೆ ಏನು ಮಾಡುವುದಕ್ಕೆ ಆಗುತ್ತೆ. ಡ್ರಗ್ಸ್ ವಿಚಾರದಲ್ಲಿ ಈಗ ಜಾಗೃತಿ ಬಂದಿದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಮಾಧ್ಯಮಗಳು ಬೇರೆ ವಿಷಯ ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.

ಮನುಷ್ಯ ಎಂದ ಮೇಲೆ ರಾಜಕಾರಣಿಗಳು ಸೇರಿ ಎಲ್ಲರೂ ಯಾವುದಾದರೊಂದರಲ್ಲಿ ಭಾಗಿಯಾಗಿದ್ದಾರೆ. ನಾನು ಅದರಲ್ಲಿ ಇದ್ದರೆ ನಾನೂ ಬರಬೇಕಾಗುತ್ತದೆ. ನಾನು ಅಫೀಮ್, ಸಿಗರೇಟ್ ಸೇದುವವನು ಅಲ್ಲ ಹಾಗೂ ಕ್ಲಬ್‍ಗೆ ಹೋಗುವವನೂ ಅಲ್ಲ, ನನ್ನ ಮೇಲೆ ಆರೋಪ ಇದ್ದರೆ ಅದು ಹೊರಗೆ ಬರಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News