×
Ad

ಬಿ.ವೈ.ವಿಜಯೇಂದ್ರ ವಿರುದ್ಧ ಎಫ್‍ಐಆರ್ ಗೆ ತಡೆ ಆರೋಪ: ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ?

Update: 2020-10-03 22:10 IST

ಬೆಂಗಳೂರು, ಅ.3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ಆರೋಪದಡಿ ಇಲ್ಲಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸದ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಕುಟುಂಬದ ಸದಸ್ಯರು ಸುಲಿಗೆ ಮತ್ತು ವಸೂಲಿ ದಂಧೆ ಮಾಡಿದ್ದಾರೆಂದು ಆಪಾದಿಸಿ ಜನಾಧಿಕಾರ ಸಂಘರ್ಷ ಪರಿಷತ್ತಿನ ಪ್ರಮುಖರು ಇತ್ತೀಚಿಗೆ ದೂರು ಸಲ್ಲಿಸಿದ್ದರು. ಆದರೆ, ದೂರು ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿ 120 ಗಂಟೆಗಳಾದರೂ ಎಫ್‍ಐಆರ್ ದಾಖಲಾಗಿಲ್ಲ. ಹೀಗಾಗಿ ದೂರುದಾರರು ಐಪಿಸಿ ಕಲಂ 217ರ ಪ್ರಕಾರ ಠಾಣೆಯ ಇನ್‍ಸ್ಪೆಕ್ಟರ್ ಕೃಷ್ಣಮೂರ್ತಿ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಸರಕಾರಿ ನೌಕರರು ಕಾನೂನಿನ ನಿರ್ದೇಶನ ಉಲ್ಲಂಘಿಸಿ ಯಾರನ್ನಾದರೂ ಶಿಕ್ಷೆಯಿಂದ ರಕ್ಷಿಸಲು ತಡೆದರೆ ಐಪಿಸಿ ಕಲಂ 217ರ ಪ್ರಕಾರ, ಸಂಜ್ಞೆಯ ಅಪರಾಧ ಆಗಿದೆ. ಈ ಅಪರಾಧದಲ್ಲಿ ಪೊಲೀಸ್ ಅಧಿಕಾರಿಯು ನ್ಯಾಯಾಲಯದ ಅನುಮತಿಯಿಲ್ಲದೆ ಎಫ್‍ಐಆರ್ ದಾಖಲಿಸಬಹುದಾಗಿದೆ. ಕೊಲೆ, ಕಳ್ಳತನ, ದರೋಡೆ, ಸುಲಿಗೆ ಹಾಗೂ ಅತ್ಯಾಚಾರದಂತ ಅಪರಾಧಗಳು ಸಂಜ್ಞೆಯ ಅಪರಾಧದ ಅಡಿಯಲ್ಲಿ ಬರುತ್ತದೆ.

ದೂರಿನ ಮಾಹಿತಿಯು ಸಂಜ್ಞೆಯ ಅಪರಾಧವಾಗಿದೆ ಎಂದು ತಿಳಿದು ಬಂದರೆ ಸಿಆರ್‍ಪಿಸಿ ಸೆಕ್ಷನ್ 154 ರಡಿಯಲ್ಲಿ ಠಾಣಾಧಿಕಾರಿಗಳು ಕಡ್ಡಾಯವಾಗಿ ಎಫ್‍ಐಆರ್ ದಾಖಲಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೂರ್ವ ವಿಚಾರಣೆಯನ್ನು ಮಾಡಲು ಪೊಲೀಸರಿಗೆ ಅವಕಾಶವಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಪೊಲೀಸರು ಸಿಆರ್‍ಪಿಸಿ ಸೆಕ್ಷನ್ 154 ಅನ್ನು ಕೂಡಾ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News