ರಣಹದ್ದುಗಳ ಸಂರಕ್ಷಣೆಗೆ ರಾಮನಗರದಲ್ಲಿ ಫೀಡಿಂಗ್ ಕ್ಯಾಂಪ್: ಅರಣ್ಯ ಸಚಿವ ಆನಂದ್ ಸಿಂಗ್

Update: 2020-10-03 17:35 GMT

ಬಳ್ಳಾರಿ, ಅ.3: ರಣಹದ್ದುಗಳ ಸಂತತಿ ಕ್ರಮೇಣ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ರಣಹದ್ದುಗಳ ಸಂತತಿ ರಕ್ಷಣೆ ಸಲುವಾಗಿ ರಾಮನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಣಹದ್ದು ಫೀಡಿಂಗ್ ಕ್ಯಾಂಪ್ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ಎಸ್.ಆನಂದ್‍ ಸಿಂಗ್ ಹೇಳಿದರು.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸಮೀಪದ ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಆವರಣದಲ್ಲಿ ವಲಯ ಅರಣ್ಯ ಇಲಾಖೆಯ ಬಳ್ಳಾರಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 66ನೆ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ರಕ್ಷಣೆಯು ಸಾರ್ವಜನಿಕರಲ್ಲಿ ಸ್ವಯಂಕೃತವಾಗಿ ಮೂಡಬೇಕು, ಪ್ರಸ್ತುತ ದಿನಗಳಲ್ಲಿ ಪ್ರಕೃತಿಯನ್ನು ಕಾಣುವ ಹಾಗೂ ಬೆಳೆಸುವ ಮನಸ್ಥಿತಿ ಬದಲಾಗಬೇಕಿದೆ. ಇಲಾಖೆಯಲ್ಲಿ ಅಧಿಕಾರಿಗಳ ಮೇಲೆ ಆರೋಪ ಹೆಚ್ಚು, ಇದನ್ನು ಸವಾಲಾಗಿ ಸ್ವೀಕರಿಸಿ ಇಲಾಖೆಯ ಅಧಿಕಾರಿಗಳು ಅರಣ್ಯ ರಕ್ಷಣೆ ಜೊತೆ ಸಾರ್ವಜನಿಕರ ಜೊತೆ ಸ್ನೇಹ ಸಂಬಂಧ ಕೂಡ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಬಂಡೀಪುರ ಅರಣ್ಯ ಪ್ರದೇಶದ ಹಾಡಿಗಳಲ್ಲಿರುವ ಗುಂಪುಗಳೇ ಇಂದಿಗೂ ಅರಣ್ಯ ರಕ್ಷಣೆಯನ್ನು ಮಾಡುತ್ತಿವೆ. ಅವರ ಜೊತೆ ಎಲ್ಲರಿಗೂ ಅರಣ್ಯ ರಕ್ಷಣೆಯ ಕಲ್ಪನೆ ಹಾಗೂ ಕರ್ತವ್ಯ ಮೂಡಬೇಕು ಎಂದು ಆನಂದ್ ಸಿಂಗ್ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ ಮಾತನಾಡಿ, ಬಾಪೂಜಿಯವರು ಪರಿಸರಕ್ಕೆ ಜೀವಸಂಕುಲದ ಎಲ್ಲ ಅಗತ್ಯತೆಗಳನ್ನು ಪೂರೈಸುವ ಶಕ್ತಿಯಿದೆ, ಆದರೆ ದುರಾಸೆಗಳನ್ನಲ್ಲ ಎಂದು ಹೇಳಿದ್ದಾರೆ. ಅರಣ್ಯ ಸಂರಕ್ಷಣೆ ಕೈಗೊಳ್ಳುವ ಹಾಗೂ ಈ ಕುರಿತು ಎಲ್ಲರಿಗೂ ಜಾಗೃತಿ ಮೂಡಿಸುವ ಉದ್ದೇಶದಿಂದಲೇ 1952 ರಲ್ಲಿ ಈ ಸಪ್ತಾಹದ ಪರಿಕಲ್ಪನೆ ಶುರುವಾಗಿ, 1954ರಿಂದ ಕಾರ್ಯಾರಂಭವಾಗಿದೆ ಎಂದರು.

ರಣಹದ್ದುಗಳ ರಕ್ಷಣೆಯೆ ಈ ವರ್ಷ ಸಪ್ತಾಹದ ಧ್ಯೇಯ ವಾಕ್ಯವಾಗಿದೆ. ಜಗತ್ತಿನ 97 ಭಾಗಭೂಮಿ ಮನುಷ್ಯರು ಆಕ್ರಮಿಸಿ ಉಳಿದ 3 ಭಾಗ ಮಾತ್ರ ವನ್ಯಜೀವಿಗಳು ಹೊಂದಿವೆ. ಪ್ರಸ್ತುತ ಮನುಷ್ಯನಿಗೆ ಬಾಧಿಸುತ್ತಿರುವ ಸಾಂಕ್ರಾಮಿಕ ರೋಗಗಳನ್ನು ಮನುಷ್ಯನೇ ಅತಿಯಾಸೆಯಿಂದ ತಂದುಕೊಂಡದ್ದಾಗಿದೆ. ಮನುಷ್ಯನು ತನ್ನ ಆರೋಗ್ಯದ ಕಾಳಜಿ ಜೊತೆ ಪರಿಸರದ ಕಾಳಜಿಯನ್ನು ಹೊಂದಿದಾಗ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ, ಹೊಸಪೇಟೆ ವಲಯ ಅರಣ್ಯಾಧಿಕಾರಿ ವಿನಯ್, ವನ್ಯಜೀವಿ ವಲಯ ಅರಣ್ಯಾಧಿಕಾರಿ ಉಷಾ, ದರೋಜಿ ಕರಡಿಧಾಮದ ದೇವರಾಜ ಸೇರಿದಂತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News