×
Ad

ಮಾನ ಮರ್ಯಾದೆ ಇದ್ದರೆ ಬಿಜೆಪಿಯ ದಲಿತ ಶಾಸಕರು, ಎಂಪಿಗಳು ರಾಜೀನಾಮೆ ನೀಡಲಿ: ಪ್ರೊ.ಭಗವಾನ್

Update: 2020-10-03 23:16 IST

ಮೈಸೂರು, ಅ.3: ಬಿಜೆಪಿಯಲ್ಲಿರುವ ದಲಿತ ಶಾಸಕರು ಮತ್ತು ಎಂಪಿಗಳಿಗೆ ನಿಜವಾಗಿಯೂ ಮಾನ ಮರ್ಯಾದೆ ಇದ್ದರೆ ಉತ್ತರ ಪ್ರದೇಶದಲ್ಲಿ ನಡೆದ ಯುವತಿಯ ಹತ್ಯೆ ಖಂಡಿಸಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆಗ್ರಹಿಸಿದರು.

ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಶನಿವಾರ ದಲಿತ ಸಂಘಟನೆಗಳ ಒಕ್ಕೂಟ, ಅಲ್ಪಸಂಖ್ಯಾತರ ವೇದಿಕೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಎಸ್ಡಿಪಿಐ ವತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಪುರಭವನದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಉತ್ತರ ಪ್ರದೇಶದ ಘಟನೆ ಖಂಡಿಸಿ ಉತ್ತರ ಪ್ರದೇಶದಲ್ಲಿರುವ ದಲಿತ ಶಾಸಕರು, ಎಂಪಿಗಳು ಈಗಾಗಲೇ ರಾಜೀನಾಮೆ ನೀಡಬೇಕಿತ್ತು. ಜೊತೆಗೆ ಇತರೆ ರಾಜ್ಯದಲ್ಲಿರುವ ಎಲ್ಲಾ ದಲಿತ ಶಾಸಕರು, ಎಂಪಿಗಳು ರಾಜೀನಾಮೆ ನೀಡಬೇಕು ಎಂದರು.

ದಲಿತರು ಸಂಘಟಿತರಾಗದಿರುವುದರಿಂದ ಪದೇ ಪದೇ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆಯತ್ತಿವೆ. ಹಾಗಾಗಿ ಇನ್ನು ಮುಂದಾದರೂ ದಲಿತರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ನಾನು ಹದಿನೈದು ವರ್ಷಗಳ ಹಿಂದೆಯೇ ದಲಿತರ ಮೇಲಿನ ಅತ್ಯಾಚಾರ, ಕೊಲೆ ಕುರಿತು ಒಂದು ಲೇಖನ ಬರೆದಿದ್ದೆ. ಯಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಾರೋ ಅವರ ಸ್ಥಿರ ಚರಾಸ್ಥಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಗ ಯಾರೂ ಸಹ ಇಂತಹ ಹೇಯ ಕೃತ್ಯ ಎಸಗುವುದಿಲ್ಲ ಎಂದರು.

ಎಲ್ಲರೂ ಯೋಗಿ ಆದಿತ್ಯನಾಥನ ಸರ್ಕಾರ ವಜಾಗೊಳಿಸಬೇಕು ಎನ್ನುತ್ತಿದ್ದಾರೆ. ಇದರ ಜೊತೆಗೆ ನರೇಂದ್ರ ಮೋದಿ ಸರ್ಕಾರವೂ ತೊಲಗಬೇಕು. ಮೋದಿ ಸ್ವಂತ ಆಲೋಚನೆ ಮೇಲೆ ಅಧಿಕಾರ ನಡೆಸದೆ ಮೋಹನದ ಭಾಗವತ್ ಅಣತಿಯಂತೆ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ದಲಿತ ಮುಖಂಡ ಪುರುಶೋತ್ತಮ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಭುಗತಗಳ್ಳಿ ಮಣಿ, ಹರಿಹರ ಆನಂದಸ್ವಾಮಿ, ಸ್ವರಾಜ್ ಇಂಡಿಯಾದ ಪುನೀತ್, ನೆಲೆ ಹಿನ್ನಲೆ ಗೋಪಾಲ್, ಸಾಹಿತಿ ಸಿದ್ದಸ್ವಾಮಿ, ಎಸ್ಡಿಪಿಐ ಮುಖಂಡ ಅಬ್ದುಲ್ ಮಜೀದ್, ಅಮ್ಜದ್ ಖಾನ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್, ನಾಗೇಶ್, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News