ಶಿವಾಜಿ ಪುತ್ಥಳಿಗೆ ಹಾರ ಹಾಕುವ ವಿಚಾರದಲ್ಲಿ ಜಟಾಪಟಿ: ಅರೇಮಲ್ಲಾಪುರ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

Update: 2020-10-04 13:01 GMT

ಹಾವೇರಿ, ಅ. 4: ಶಿವಾಜಿ ಪುತ್ಥಳಿಗೆ ಹಾರ ಹಾಕುವ ವಿಚಾರದಲ್ಲಿ ಹಾವೇರಿ ಜಿಲ್ಲೆಯ ಠಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಶರಣಬಸವೇಶ್ವರ ಮಠದ ಪೀಠಾಧ್ಯಕ್ಷರಾಗಿರುವ ಪ್ರಣವಾನಂದಶ್ರೀ ಹಾಗೂ ಗ್ರಾಮಸ್ಥರ ಮಧ್ಯೆ ಜಟಾಪಟಿ ನಡೆದಿದ್ದು, ಗ್ರಾಮದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರವಿವಾರ ಬೆಳಗ್ಗೆ ಸ್ವಾಮೀಜಿ ಹಾರ ಹಾಕುವುದನ್ನು ವಿರೋಧಿಸಿದ್ದ ಗ್ರಾಮಸ್ಥರು ನೀವು ನಮ್ಮ ಸ್ವಾಮೀಜಿಯಲ್ಲ. ನಮ್ಮೂರಿಂದ ಹೊರಹೋಗಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮಠಕ್ಕೆ ಬೀಗ ಹಾಕಿ ಸ್ವಾಮೀಜಿಗೆ ಘೇರಾವ್ ಹಾಕಿ ವಿರೋಧ ವ್ಯಕ್ತಪಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಸ್ವಾಮೀಜಿ ಹಾಗೂ ಅರೇಮಲ್ಲಾಪುರ ಗ್ರಾಮಸ್ಥರ ಮಧ್ಯೆ ಈ ಹಿಂದಿನಿಂದಲೂ ಕ್ಷುಲ್ಲಕ ಕಾರಣಕ್ಕೆ ವಾದ-ವಿವಾದಗಳು ನಡೆಯುತ್ತಾ ಬಂದಿದ್ದವು. ಈಗ ಶಿವಾಜಿ ಮಹಾರಾಜರ ಪುತ್ಥಳಿಗೆ ಹಾರ ಹಾಕುವ ವಿಚಾರದಲ್ಲಿ ಜಟಾಪಟಿ ನಡೆದಿದೆ.

ಗ್ರಾಮದ ಕೆಲ ಜನರ ವಿರೋಧದ ನಡುವೆಯೂ ಪ್ರಣವಾನಂದಶ್ರೀ ಸ್ಥಳೀಯ ಶಾಸಕ ಅರುಣಕುಮಾರ್ ಪೂಜಾರ ಅವರೊಂದಿಗೆ ಗ್ರಾಮದ ಸರ್ಕಲ್‍ನಲ್ಲಿರುವ ಶಿವಾಜಿ ಪುತ್ಥಳಿಗೆ ಮಾಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News