×
Ad

ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಒಂದೇ ಪರಿಹಾರ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-10-04 19:57 IST

ಬೆಂಗಳೂರು, ಅ. 4: ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಒಂದೇ ಪರಿಹಾರ. ಉಪಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಿ.ಕೆ.ರವಿ ಪತ್ನಿ ಕುಸುಮಾ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷಕ್ಕೆ ಸೇರ್ಪಡೆಯಾದ ಎಲ್ಲಾ ಮುಖಂಡರನ್ನು ಸ್ವಾಗತಿಸುತ್ತೇನೆ. ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ಜೊತೆ ನಾಲ್ಕು ಕ್ಷೇತ್ರಗಳ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆ ಎದುರಾಗಿದೆ. ಆದರೆ, ಈ ಎರಡು ಉಪಚುನಾವಣೆಗಳು ಅವಧಿ ಮುಗಿಯುವ ಮುನ್ನವೇ ಎದುರಾಗಿದೆ ಎಂದರು.

ಇನ್ನೂ ಎರಡೂವರೆ ವರ್ಷ ಈ ಕ್ಷೇತ್ರಗಳಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸುವ ಕಾಲಾವಧಿ ಇದೆ. ಶಿರಾ ಕ್ಷೇತ್ರದಲ್ಲಿ ಶಾಸಕ ಸತ್ಯನಾರಾಯಣ ನಿಧನದಿಂದ ಉಪಚುನಾವಣೆ ಎದುರಾಗಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಟಿಬಿ ಜಯಚಂದ್ರ ಕೇವಲ 12 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು ಎಂದು ಹೇಳಿದರು.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರ ರಚಿಸಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರ ನಡೆಸಿದ್ದೇವೆ. ಆದರೆ ಹೆಚ್ಚು ಸಮಯ ಅಧಿಕಾರವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 17 ಶಾಸಕರನ್ನು ಸೆಳೆದು ಸರಕಾರ ರಚನೆ ಮಾಡಿತು ಎಂದು ದೂರಿದರು.

ಪ್ರಸ್ತುತವಿರುವ ಸರಕಾರ ಜನರ ಬೆಂಬಲ ಹಾಗೂ ಪ್ರಜಾಪ್ರಭುತ್ವದ ರೀತಿಯಲ್ಲಿ ಇವರು ಅಧಿಕಾರಕ್ಕೆ ಬರಲಿಲ್ಲ. ಈ ರೀತಿ ಅಧಿಕಾರಕ್ಕೆ ಬಂದವರು ಇನ್ನೂ ಎರಡೂವರೆ ವರ್ಷ ಅಧಿಕಾರದಲ್ಲಿ ಇರುತ್ತೇವೆ ಅಂದುಕೊಂಡಿದ್ದಾರೆ. ಸರಕಾರದ ಪತನಕ್ಕೆ ಕಾರಣರಾದ 17 ಮಂದಿಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ರಾಜೀನಾಮೆ ನೀಡಿದ ಮುನಿರತ್ನ ಕೂಡಾ ಒಬ್ಬ. ಇಂದು ಜೆಡಿಎಸ್ ಹಾಗೂ ಇತರ ಕೆಲ ಪಕ್ಷಗಳನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಹಲವರು ಸೇರ್ಪಡೆಯಾಗುತ್ತಿರುವುದು ಸಂತಸದ ಸಂಗತಿ. ಇದು ಉತ್ತಮ ಬೆಳವಣಿಗೆ ಎಂದರು.

ಜನರ ಪರವಾಗಿ ಇರುವ ಪಕ್ಷ ಕಾಂಗ್ರೆಸ್ ಮಾತ್ರ. ನಮ್ಮ ಸರಕಾರವೇ ಮುಂದೆ ಬರಲಿದೆ ಎಂಬ ಎಲ್ಲಾ ರೀತಿಯ ಸೂಚನೆಗಳು ಇದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬೇರೆ ಬೇರೆ ಕಾರಣಗಳಿಂದ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿಲ್ಲವೇ ಹೊರತು ಜನ ವಿರೋಧಿಯಾಗಿ ನಾವು ಅಧಿಕಾರ ಕಳೆದುಕೊಳ್ಳಲಿಲ್ಲ ಎಂದು ಅವರು ಪ್ರತಿಪಾದಿಸಿದರು.

ಜನರಿಗಾಗಿ ಹೊಸ ಕಾರ್ಯಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ. ಅದನ್ನೇ ಇಂದಿನ ಸರ್ಕಾರ ಮುಂದುವರಿಸುತ್ತಿದೆ ಹೊರತು ಯಡಿಯೂರಪ್ಪ ಯಾವುದಾದರೂ ಹೊಸ ಕಾರ್ಯಕ್ರಮ ತಂದಿದ್ದಾರೆಯೇ? ವಿವಿಧ ಭಾಗ್ಯಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಗಳನ್ನು ಜಾರಿಗೆ ತರದಿದ್ದರೆ ಇಂದು ಜನ ಬೀದಿಯಲ್ಲಿ ಇರಬೇಕಾದ ಸ್ಥಿತಿ ಬರುತ್ತಿತ್ತು. ಯಡಿಯೂರಪ್ಪ ಏನು ಮಾಡಿದ್ದಾರೆ? ಯಾರಿಗೂ ಹಣ ಬಿಡುಗಡೆ ಮಾಡಿಲ್ಲ. ಸರಕಾರಿ ಉದ್ಯೋಗಿಗಳಿಗೆ ವೇತನ ಕೊಡುತ್ತಿಲ್ಲ. ಪಿಂಚಣಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಜೆಡಿಎಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಪಕ್ಷ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ. ಎಲ್ಲ ವರ್ಗದವರಿಗೂ ನ್ಯಾಯ ಒದಗಿಸುವ ಶಕ್ತಿ ನಮಗೆ ಮಾತ್ರ ಇದೆ. ತಿಪ್ಪರಲಾಗ ಹಾಕಿದರೂ ಜೆಡಿಎಸ್‍ಗೆ ಇನ್ನೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಲು ಮಾತ್ರ ಅವರು ಶಕ್ತರು ಎಂದರು.

ಕುಮಾರಸ್ವಾಮಿ ಕಣ್ಣೀರು ಹಾಕಿಕೊಂಡು ಜನರ ಬಳಿ ಹಾಲು ಇಲ್ಲವೇ ವಿಷ ಕೊಡಿ ಎಂದು ಹೇಳಿದ್ದಾರೆ. ಇವೆಲ್ಲ ರಾಜಕಾರಣಿ ಲಕ್ಷಣವಾ? ಜನಸೇವೆ ನಡೆಸಲು ನಾನು ಸಿದ್ಧವಿದ್ದೇನೆ ನನಗೆ ಆಶೀರ್ವಾದ ನೀಡಿ ಎಂದು ಕೇಳಬೇಕು. ಕಣ್ಣೀರು ಹಾಕುವುದು ಇಂದು ನಿನ್ನೆಯ ಬೆಳವಣಿಗೆ ಅಲ್ಲ. ದೇವೇಗೌಡರು ಕಣ್ಣೀರು ಹಾಕುತ್ತಿದ್ದರು ಎಂದು ಕುಮಾರಸ್ವಾಮಿ ಅದನ್ನು ಮುಂದುವರಿಸಿದ್ದಾರೆ ಎಂದು ಲೇವಡಿ ಮಾಡಿದರು.

ಸಾಲದ ಹೊರೆ ಹೆಚ್ಚಳ: 4 ಲಕ್ಷ ಕೋಟಿ ರೂ. ಮೊತ್ತದ ಸಾಲವನ್ನು ಯಡಿಯೂರಪ್ಪ ಸರ್ಕಾರ ಮಾಡಿದೆ. 23 ಲಕ್ಷ ರೂಪಾಯಿ ಮೊತ್ತದ ಬಡ್ಡಿಯನ್ನು ಪಾವತಿಸುತ್ತಿದೆ. ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಒಂದುವರೆ ಲಕ್ಷ ಕೋಟಿ ರೂಪಾಯಿ ಮೊತ್ತದ ಸಾಲ ಮಾಡಲಾಗಿದೆ. ಇದೊಂದು ಲಂಚಬಾಕ ಸರಕಾರ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಜೆಡಿಎಸ್ ಹಾಗೂ ಬಿಜೆಪಿ ಒಳಗೊಳಗೆ ಒಪ್ಪಂದ ಮಾಡಿಕೊಳ್ಳುವ ಗಿರಾಕಿಗಳು. ಜೆಡಿಎಸ್ ಈ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಿಜೆಪಿ ಅಧಿಕಾರಕ್ಕೆ ತರುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವೊಂದೇ ಪರಿಹಾರ. ಜಿಲ್ಲೆಯಲ್ಲಿದ್ದ ಕಾಂಗ್ರೆಸ್ ಒಂದಿಷ್ಟು ಅಸಮಾಧಾನ ಕೂಡ ಈಗ ಬಗೆಹರಿದಿದೆ. ಎಲ್ಲಾ ನಾಯಕರು ಒಂದಾಗಿದ್ದಾರೆ. ಹೀಗೆ ಮುಂದುವರಿಯಲಿದ್ದಾರೆ. ಶಿರಾ ಕ್ಷೇತ್ರದಿಂದಲೂ ಅಭ್ಯರ್ಥಿಯನ್ನು ಶಿಫಾರಸು ಮಾಡಿ ಕಳಿಸಿಕೊಡಲಾಗುತ್ತದೆ. ಅಭ್ಯರ್ಥಿಯ ಘೋಷಣೆ ಆಗಲಿದ್ದು ಗೆಲ್ಲಿಸಿಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News