ಮಂತ್ರವಾದಿಯಿಂದ ನಮ್ಮ ಕುಟುಂಬದಲ್ಲಿ ಒಡಕು: ಚಿತ್ರ ಸಾಹಿತಿ ಕೆ.ಕಲ್ಯಾಣ ಆರೋಪ

Update: 2020-10-04 16:04 GMT

ಬೆಳಗಾವಿ, ಅ. 4: ಪತ್ನಿಯ ಸ್ವಭಾವವನ್ನು ನಾನು ಚೆನ್ನಾಗಿ ಅರಿತಿದ್ದೇನೆ, ಅವಳು ತುಂಬಾ ಒಳ್ಳೆಯವಳು. ಆದರೆ, ಮನೆ ಕೆಲಸದಾಕೆ ಹಾಗೂ ಸ್ವಾಮೀಜಿಯೊಬ್ಬರ ದುರಾಸೆಯಿಂದಾಗಿ ನಮ್ಮ ಸಂಸಾರದಲ್ಲಿ ಒಡಕು ಮೂಡಿದೆ ಎಂದು ಚಿತ್ರ ಸಾಹಿತಿ ಕೆ.ಕಲ್ಯಾಣ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅವಳ ಪ್ರೀತಿಗಾಗಿ ನಾನು ಹಂಬಲಿಸುತ್ತಿದ್ದೇನೆ. ಅವಳ ಆಸ್ತಿಯನ್ನು ಪಡೆಯುವ ಯಾವುದೇ ಆಲೋಚನೆಯೂ ನನ್ನಲ್ಲಿ ಇಲ್ಲ. ಮನೆಕೆಲಸದಾಕೆ ಗಂಗಾ ಕುಲಕರ್ಣಿ ಹಾಗೂ ಮಂತ್ರವಾದಿ ಶಿವಾನಂದ ವಾಲಿ ಸೇರಿ ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಾರೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.

ಹದಿನಾಲ್ಕು ವರ್ಷಗಳ ದಾಂಪತ್ಯ ನಮ್ಮದು. ತಂದೆ, ತಾಯಿ ಇಬ್ಬರೂ ತೀರಿಕೊಂಡಿದ್ದು, ಅತ್ತೆ-ಮಾವ ನಮ್ಮ ಜೊತೆಗೆ ಇದ್ದಾರೆ. ಗಂಗಾಳನ್ನು ಅಡುಗೆ ಕೆಲಸಕ್ಕೆ ಸೇರಿಸಿಕೊಂಡ ಮೇಲೆ ಮನೆಯಲ್ಲಿ ಈ ಎಲ್ಲ ಸಮಸ್ಯೆಗಳು ಪ್ರಾರಂಭವಾದವು ಎಂದು ಹೇಳಿದರು.

ಮನೆಯಲ್ಲಿ ದೆವ್ವ ಇದೆ ಎಂಬ ನೆಪಯೊಡ್ಡಿ ಮಧ್ಯರಾತ್ರಿ ಪೂಜೆ ಮಾಡುತ್ತಿದ್ದರು. ಆಗಾಗ ಬಾಗಲಕೋಟೆ ಶಿವಾನಂದ ವಾಲಿ(ಸ್ವಾಮೀಜಿ) ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಈ ಎಲ್ಲ ಪೂಜೆಗಳು ನಡೆದ ಬಳಿಕವೇ ಪತ್ನಿ ನನ್ನನ್ನು ಅಪರಿಚಿತನಂತೆ ಕಾಣುತ್ತಿದ್ದಾಳೆ ಎಂದು ತಿಳಿಸಿದರು.

ವಿಚ್ಛೇದನ ಹಂತಕ್ಕೆ ಬಂದರೆ ಸಮಾಲೋಚನೆಗೆ ಅವಕಾಶವಿದೆ. ಪ್ರೀತಿ ಉಳಿಯುತ್ತದೆಂಬ ನಂಬಿಕೆ ನನಗಿದೆ. ಇಬ್ಬರೂ ಒಂದಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News