ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ವಿಫಲ: ಅಭ್ಯರ್ಥಿಗಳ ಆಕ್ರೋಶ

Update: 2020-10-04 16:17 GMT

ಬೆಂಗಳೂರು, ಅ. 4: ನೆಡುತೋಪು ಅಧೀಕ್ಷಕರು, ಸಹಾಯಕ ನೆಡುತೋಪು ಅಧೀಕ್ಷಕರು ಹಾಗೂ ಅರಣ್ಯ ರಕ್ಷಕರು ಸೇರಿ 50 ಹುದ್ದೆಗಳಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನೇಮಕಾತಿ ಪ್ರಕ್ರಿಯೆ ಆರಂಭಿಸಿ ನಾಲ್ಕು ವರ್ಷಗಳಾಗುತ್ತಿದ್ದರೂ ಇದುವರೆಗೂ ಪ್ರಕ್ರಿಯೆ ಪೂರ್ಣಗೊಳಿಸದಿರುವುದಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲಾಗಿದ್ದು, 10 ಸಾವಿರಕ್ಕೂ ಅಧಿಕ ಜನರು 50 ಹುದ್ದೆಗಳಿಗೆ ಅರ್ಜಿ ಹಾಕಿದ್ದರು. ಈ ಪೈಕಿ ಸುಮಾರು 1,457 ಅಭ್ಯರ್ಥಿಗಳು ಹೆಚ್ಚು ಅಂಕ ಗಳಿಸಿದ್ದು, 1:20 ಅನುಪಾತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗೆ ಆಹ್ವಾನಿಸಿದ್ದಾರೆ. ಆದರೆ, ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಅದಕ್ಕೆ ಅರ್ಹರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳಿಂದ ಒಂದಲ್ಲ ಒಂದು ನೆಪ ಹೇಳುತ್ತಾರೆ. ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಕೇಳಿದರೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿ ಎನ್ನುತ್ತಾರೆ. ಅವರನ್ನು ಕೇಳಿದರೆ, ನಿಗಮದ ಅಧಿಕಾರಿಗಳೇ ಇದಕ್ಕೆ ಉತ್ತರ ನೀಡಬೇಕು ಎನ್ನುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಆದರೆ, ಕಾರಣ ಮಾತ್ರ ತಿಳಿಸುತ್ತಿಲ್ಲ. ಈ ಹುದ್ದೆಯ ನಿರೀಕ್ಷೆಯಲ್ಲಿ ಬೇರೆ ಪರೀಕ್ಷೆಗಳತ್ತಲೂ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ವಯೋಮಿತಿ ಮೀರುವ ಆತಂಕದಲ್ಲಿದ್ದೇವೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.

ನೇಮಕಾತಿ ಪ್ರಕ್ರಿಯೆ ನಡೆಯುವ ಜವಾಬ್ದಾರಿಯನ್ನು ಏಜೆನ್ಸಿಯೊಂದಕ್ಕೆ ನೀಡಲಾಗಿತ್ತು. ಆದರೆ, ಕೆಲವು ಲೋಪದೋಷಗಳಿರುವುದರಿಂದ ಪರೀಕ್ಷೆ ಮುಂದೂಡಲಾಗಿತ್ತು. ಮಾರ್ಚ್-ಎಪ್ರಿಲ್‍ನಲ್ಲಿ ಪರೀಕ್ಷೆ ನಡೆಸುವ ಉದ್ದೇಶವಿತ್ತು. ಆದರೆ ಕೊರೋನ ಸೋಂಕಿನ ಕಾರಣದಿಂದ ಮತ್ತೆ ಮುಂದೂಡಲಾಯಿತು. ಈಗ ಸರಕಾರ ನೇಮಕಾತಿ ಸದ್ಯಕ್ಕೆ ಬೇಡ ಎಂದು ಹೇಳಿದೆ. ಆದರೂ, ಈ ಬಗ್ಗೆ ಒಂದೆರಡು ವಾರಗಳಲ್ಲಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಧು ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News