ಬೆಂಗಳೂರು-ಮೈಸೂರು ನಡುವಿನ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸುವ ಮಿತಿ ಹೆಚ್ಚಿಸಲು ಆಗ್ರಹ
ಬೆಂಗಳೂರು, ಅ. 4: ಉದ್ಯೋಗಿಗಳಿಗೆ ಅನುಕೂಲಕರವಾಗಲಿ ಎಂಬ ದೃಷ್ಟಿಯಿಂದಲೇ ಪ್ರಾರಂಭವಾಗಿರುವ ಬೆಂಗಳೂರು-ಮೈಸೂರು ನಡುವಿನ ವಿಶೇಷ ರೈಲುಗಳಲ್ಲಿ ಪಾಸ್(ಸೀಸನ್ ಟಿಕೆಟ್, ಪಾಸ್) ಅಥವಾ ಟಿಕೆಟ್ ಕಾಯ್ದಿರಿಸಲು ವಿಧಿಸಲಾಗಿರುವ ಮಿತಿಯನ್ನು ಏರಿಕೆ ಮಾಡಲು ಪ್ರಯಾಣಿಕರಿಂದ ಒತ್ತಡ ಹೆಚ್ಚಿದೆ.
ಕೊರೋನ ಹಿನ್ನೆಲೆಯಲ್ಲಿ ಸರಕಾರ ಸೋಂಕಿತರ ಸಂಪರ್ಕ ಪತ್ತೆ ಮಾಡುವ ಪದ್ಧತಿ ಹೊಂದಿತ್ತು. ಆ ದಿನಗಳಲ್ಲಿ ತಿಂಗಳಿಗೆ 12 ಟಿಕೆಟ್‍ನ್ನು ಮಾತ್ರ ಕಾಯ್ದಿರಿಸಲು ಸಾಧ್ಯವಾಗುವಂತೆ ಮಿತಿಯನ್ನು ವಿಧಿಸಲಾಗಿತ್ತು. ಆದರೆ, ಈಗ ಸರಕಾರ ಕಾಂಟ್ಯಾಕ್ಟ್ ಟ್ರೇಸಿಂಗ್‍ನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇತ್ತ ಸೀಸನ್ ಟಿಕೆಟ್(ಸೀಸನ್ ಪಾಸ್)ಗೂ ಅನುಮತಿ ನೀಡುತ್ತಿಲ್ಲ. ಟಿಕೆಟ್ ಕಾಯ್ದಿರಿಸುವ ಮಿತಿಯನ್ನೂ ಏರಿಕೆ ಮಾಡುತ್ತಿಲ್ಲ. ಇದರಿಂದಾಗಿ, ಬೆಂಗಳೂರು-ಮೈಸೂರು ನಡುವೆ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ.
ಆಧಾರ್ ನೊಂದಿಗೆ ಜೋಡಣೆಯಾಗಿರುವ ಐಆರ್‍ಸಿಟಿಸಿ ಖಾತೆಗಳಿಗೆ 12 ಟಿಕೆಟ್‍ನ್ನು ಕಾಯ್ದಿರಿಸಲು ಅವಕಾಶವಿದ್ದರೆ, ಜೋಡಣೆಯಾಗದ ಖಾತೆಗಳಿಗೆ 6 ಟಿಕೆಟ್‍ನ್ನು ಮಾತ್ರ ಕಾಯ್ದಿರಿಸಬಹುದಾಗಿದೆ. ಉಳಿದ ದಿನಗಳಲ್ಲಿ ಪ್ಯಾಸೆಂಜರ್ ರಿಸರ್ವೇಷನ್ ವ್ಯವಸ್ಥೆಯಲ್ಲಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಇದರಿಂದ, ಹೆಚ್ಚು ಸಮಯ ಹಾಳಾಗುತ್ತದೆ ಎಂಬುದು ಪ್ರಯಾಣಿಕರ ಅಳಲಾಗಿದೆ.
ರೈಲ್ವೆ ಮಂಡಳಿ ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ ಮಾಡುವುದರ ಬಗ್ಗೆ ಸಚಿವಾಲಯದೊಂದಿಗೆ ನಡೆಸುತ್ತಿದೆ. ಸೀಸನ್ ಪಾಸ್, ಆನ್‍ಲೈನ್‍ನಲ್ಲಿ ಹೆಚ್ಚುವರಿ ಟಿಕೆಟ್‍ಗಳ ಕಾಯ್ದಿರಿಸುವಿಕೆ ಸೌಲಭ್ಯವನ್ನೂ ಪರಿಗಣಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.