ಡಾಂಬರೀಕರಣಗೊಂಡು ಒಂದೇ ವರ್ಷಕ್ಕೆ ಗುಂಡಿ ಬಿದ್ದ ಉಪ್ಪಳ್ಳಿ-ಕಲ್ದೊಡ್ಡಿ ರಸ್ತೆ

Update: 2020-10-04 17:04 GMT

ಚಿಕ್ಕಮಗಳೂರು, ಅ.3: ನಗರದ ಉಪ್ಪಳ್ಳಿ-ಕಲ್ಲುದೊಡ್ಡಿ-ಶಾಂತಿನಗರಕ್ಕೆ ಸಂಪರ್ಕ ಕಲ್ಪಿಸುವ ಉಪ್ಪಳ್ಳಿ ರಸ್ತೆಯನ್ನು ಕಳೆದ ವರ್ಷವಷ್ಟೇ ಮರುಡಾಂಬಾರೀಕರಣ ಮಾಡಿದ್ದರೂ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಗುಂಡಿಬಿದ್ದಿದೆ. ಹದಗೆಟ್ಟ ರಸ್ತೆಯಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಗರದಿಂದ ಮಲ್ಲಂದೂರು ಸಂಪರ್ಕ ರಸ್ತೆಯಲ್ಲಿರುವ ಉಪ್ಪಳ್ಳಿಯಿಂದ ಕಲ್ಲುದೊಡ್ಡಿ ಹಾಗೂ ಶಾಂತಿನಗರ ಬಡಾವಣೆಗಳ ಸಂಪರ್ಕಕ್ಕೆ ಇರುವ ಏಕೈಕ ರಸ್ತೆ ಸುಮಾರು 2 ಕಿಮೀ ಉದ್ದಕ್ಕೂ ಸಂಪೂರ್ಣವಾಗಿ ಗುಂಡಿಗಳಿಂದ ಆವೃತವಾಗಿದೆ. ಮಳೆ ಬಂತೆಂದರೆ ಈ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದೆಂದು ತಿಳಿಯದೇ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಯಲ್ಲಿ ಕೆಲವೆಡೆ ದೊಡ್ಡ ಗುಂಡಿಗಳಾಗಿದ್ದು, ವಾಹನ ಚಲಾಯಿಸಲು ಸಾರ್ವಜನಿಕರು ಪ್ರತಿದಿನ ಸರ್ಕಸ್ ಮಾಡಬೇಕಾಗಿದೆ. ಮಳೆ ಬಂದು ರಸ್ತೆಯ ಗುಂಡಿಗಳಲ್ಲಿ ನೀರು ನಿಂತಾಗಲಂತೂ ವಾಹನ ಸವಾರರು ಈ ರಸ್ತೆಯಲ್ಲಿ ವಾಹನ ಓಡಿಸಲು ನರಕಯಾತನೆ ಅನುಭವಿಸುತ್ತಿದ್ದು, ಅಪಘಾತಗಳು ಸಾಮಾನ್ಯ ಎಂಬಂತಾಗಿದೆ.

ಮಳೆ ಬಂದಾಗ ಗುಂಡಿಯಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಚಲಾಯಿಸುವಾಗ ಗುಂಡಿಗೆ ವಾಹನಗಳು ಇಳಿಯುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ಪಾದಚಾರಿಗಳಿಗೆ ಕೆಸರು ನೀರು ಹಾರುವ ಪರಿಸ್ಥಿತಿ ಉಂಟಾಗುತ್ತಿದೆ. ಈ ರಸ್ತೆಯ ನಿವಾಸಿಗಳು ಗುಂಡಿ ಮುಚ್ಚಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಿಗೆ ರಸ್ತೆ ದುರಸ್ತಿಗೆ ಮನವಿ ಮಾಡಿದರೆ ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕೆಲವೆಡೆ ಪೈಪ್ ಲೈನ್‍ಗೆ ರಸ್ತೆ ಅಗೆಯಲಾಗಿದೆಯಾದರೂ ಅಗೆದ ರಸ್ತೆಯ ಗುಂಡಿಯನ್ನು ಸರಿಯಾಗಿ ಮುಚ್ಚದೆ ಇರುವುದರಿಂದ ರಸ್ತೆ ಮತ್ತಷ್ಟು ಹದಗೆಡುವಂತಾಗಿದೆ. ರಸ್ತೆ ಬದಿಯಲ್ಲಿನ ಚರಂಡಿಗಳನ್ನೂ ದುರಸ್ತಿ ಮಾಡದ ಪರಿಣಾಮ ಮಳೆ ಬಂದಾಗ ರಸ್ತೆ ಬದಿಯ ಮನೆಗಳಿಗೂ ನೀರು ನುಗ್ಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ರಸ್ತೆ ಚಿಕ್ಕ ಕಾಲುವೆಯಾಗಿ ಮಾರ್ಪಾಡುವ ಸಾಧ್ಯತೆಗಳಿವೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಕೂಡಲೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ವಾಹನ ಮಾಲಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

'ಮಳೆ ಜೋರಾಗಿ ಬಂದರೆ ವಾಜಪೇಯಿ ಬಡಾವಣೆ ಮೂಲಕ ಹರಿದು ಬರುವ ನೀರು ಚರಂಡಿಯಲ್ಲಿ ಉಕ್ಕಿ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ರಸ್ತೆಯ ಚರಂಡಿಗಳನ್ನು ಸರಿಪಡಿಸುವ ಮೂಲಕ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿಕೊಡಬೇಕು. ಉಪ್ಪಳ್ಳಿಯಿಂದ ಇಂದಿರಾ ಗಾಂಧಿ ಬಡಾವಣೆ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳು ಹೆಚ್ಚು ಇದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಆಟೊಗಳನ್ನು ಈ ರಸ್ತೆಯಲ್ಲಿ ಓಡಿಸಲು ಸಾಧ್ಯವೇ ಇಲ್ಲದಂತಾಗಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ರಸ್ತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕೆಂದು' ಆಟೊ ಚಾಲಕ ಕಾಶಿನಾಥ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News