ಹ್ಯಾಂಬರ್ಗ್ ಸ್ಟಾರ್ಟ್-ಅಪ್ ಸಮ್ಮೇಳನಕ್ಕೆ ತೇಜಸ್ವಿ ಸೂರ್ಯಗೆ ಆಹ್ವಾನ: ಹಲವು ಭಾರತೀಯ ಸಂಘಟನೆಗಳ ಆಕ್ಷೇಪ

Update: 2020-10-05 06:41 GMT

ಹೊಸದಿಲ್ಲಿ : ಹ್ಯಾಂಬರ್ಗ್ ನಲ್ಲಿರುವ ಭಾರತೀಯ ಕಾನ್ಸುಲೇಟ್ ಆಯೋಜಿಸುತ್ತಿರುವ ಸ್ಟಾರ್ಟ್ ಅಪ್ ಸಮ್ಮೇಳನದ ಭಾಷಣಕಾರರ ಪಟ್ಟಿಯಿಂದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ಹೆಸರನ್ನು  ತೆಗೆದು ಹಾಕುವಂತೆ ಯುರೋಪ್ ಖಂಡದ ಹಲವು ಭಾರತೀಯರ ಸಂಘಟನೆಗಳು ಆಗ್ರಹಿಸಿವೆ.

``ತೇಜಸ್ವಿ ಸೂರ್ಯ ಅವರಿಗೆ  `ಹಿಂದು'  ಅಲ್ಲದ ಸಮುದಾಯಗಳ ಕುರಿತಂತೆ ಸ್ಪಷ್ಟವಾಗಿ ವಿಭಜನಾತ್ಮಕ ಅಜೆಂಡಾವಿದೆ. ಯುರೋಪಿಯನ್  ಸಿದ್ಧಾಂತಗಳಾದ ಸಮಾನತೆ, ವೈವಿಧ್ಯತೆ ಹಾಗೂ ಸರ್ವರನ್ನೂ ಒಳಗೊಳ್ಳುವ ಸಿದ್ಧಾಂತಕ್ಕೆ ಅವರ ಈ ಅಜೆಂಡಾ ವಿರುದ್ಧವಾಗಿದೆ. ಅವರ ನಿಲುವು  ವಿವಿಧ ಅಂತಾರಾಷ್ಟ್ರೀಯ ಕಾನೂನುಗಳಿಗೂ  ಹಾಗೂ ಇಯು ಚಾರ್ಟರ್ ಆಫ್ ಫಂಡಮೆಂಟಲ್ ರೈಟ್ಸ್‍ಗೂ ವಿರುದ್ಧವಾಗಿದೆ,'' ಎಂದು ಭಾರತೀಯ ಕಾನ್ಸುಲೇಟ್‍ಗೆ ಬರೆದ ಪತ್ರದಲ್ಲಿ ಹಲವು  ಸಂಘಟನೆಗಳು ಹೇಳಿವೆ.

ಈ ಪತ್ರಕ್ಕೆ ಸಹಿ ಹಾಕಿದ ಸಂಘಟನೆಗಳಲ್ಲಿ ಇಂಡಿಯಾ ಸಾಲಿಡಾರಿಟಿ ಜರ್ಮನಿ, ದಿ ಹ್ಯೂಮನಿಸಂ ಪ್ರಾಜೆಕ್ಟ್, ಸಾಲಿಡಾರಿಟಿ ಬೆಲ್ಜಿಯಂ, ಇಂಡಿಯನ್ಸ್ ಅಗೇನ್ಸ್ಟ್ ಸಿಎಎ, ಎನ್ ಆರ್‍ಸಿ ಎಂಡ್ ಎನ್‍ಪಿಆರ್-ಫಿನ್‍ಲ್ಯಾಂಡ್, ಭಾರತದ ಡೆಮಾಕ್ರೆಸಿ ವಾಚ್, ಇಂಡಿಯನ್ ಅಲಾಯನ್ಸ್ ಪ್ಯಾರಿಸ್ ಹಾಗೂ ಫೌಂಡೇಶನ್ ದಿ ಲಂಡನ್ ಸ್ಟೋರಿ ಸೇರಿವೆ.

ತೇಜಸ್ವಿ ಸೂರ್ಯ ಅವರು ಮಾಡಿರುವ ಕೆಲವು ಆಕ್ಷೇಪಾರ್ಹ ಟ್ವೀಟ್‍ಗಳು ಹಾಗೂ ಸಿಎಎ ಪ್ರತಿಭಟನೆಗಳ ಕುರಿತಂತೆ ಅವರ  ಹೇಳಿಕೆಗಳನ್ನೂ ಈ ಪತ್ರ ಉಲ್ಲೇಖಿಸಿದೆ. ``ಮೋದಿಯ ವಿರುದ್ಧ ಇರುವವರು ದೇಶವಿರೋಧಿಗಳು ಎಂದು ಸಾರ್ವಜನಿಕವಾಗಿ ಹೇಳಿದ ವ್ಯಕ್ತಿ ಇವರು. ಇಂತಹ ಹೇಳಿಕೆಗಳನ್ನು ನೀಡುವುದಕ್ಕೆ ಒಬ್ಬ ಸಂಸದನಿಗೆ ನಾಚಿಕೆಗೇಡು,'' ಎಂದು ಪತ್ರದಲ್ಲಿ ಹೇಳಲಾಗಿದೆ.

ಇಂತಹ ವ್ಯಕ್ತಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಬದಲು ವೈವಿಧ್ಯ ಹಿನ್ನೆಲೆ ಹಾಗೂ ಅನುಭವ ಇರುವವರನ್ನು ಭಾಷಣಕಾರರನ್ನಾಗಿ ಆಹ್ವಾನಿಸಬೇಕು ಎಂದು  ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News