ಶಿವಮೊಗ್ಗ: ದಲಿತ ಯುವತಿಯ ಅತ್ಯಾಚಾರ, ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2020-10-05 11:20 GMT

ಶಿವಮೊಗ್ಗ, ಅ.5: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಶಿವಮೊಗ್ಗ ನಗರದ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಬಣ) ಹಾಗೂ ಅಂಬೇಡ್ಕರ್ ಬಣ, ಬಹುಜನ ಸಮಾಜ ಪಾರ್ಟಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ, ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಉತ್ತರ ಪ್ರದೇಶ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಯುವತಿಯ ಮೇಲಿನ ಅತ್ಯಾಚಾರ ಮತ್ತು ಆಕೆಯ ಸಾವು ಸಂವಿಧಾನವನ್ನು ಹೊಸಕಿ ಹಾಕಿದೆ. ಭಾರತದ ಆತ್ಮವನ್ನು ಹಿಂಸಿಸುವಂತ ಪ್ರಕರಣ ಇದು. ಅರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕಾದ ಉತ್ತರ ಪ್ರದೇಶ ಸರಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ಅತ್ಯಾಚಾರಿಗಳ ರಕ್ಷಣೆಗೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ನೇರವಾಗಿ ಬೇಟಿ ಬಚಾವೋ ಎಂದು ಬಾಯಿ ಬಡಾಯಿ ಹೊಡೆಯುವ ಬಿಜೆಪಿಯ ಕಾಲಬುಡದಲ್ಲಿ ನಡೆದಿರುವ  ಕೃತ್ಯ. ಉತ್ತರ ಪ್ರದೇಶ ಪೊಲೀಸರು ಮೇಲ್ಜಾತಿ  ಪ್ರಭಾವಿಗಳು ನಡೆಸಿದ ಅಪರಾಧದ ಸಾಕ್ಷ್ಯನಾಶ  ಮಾಡುವ ಭಾಗವಾಗಿ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ನಡೆಸಿರುವುದು ಭಾರತದ ಸಂವಿಧಾನ ಮತ್ತು ಪ್ರಜಾತಂತ್ರವನ್ನು ಆಳುವವರ ನಾಶ ಮಾಡುತ್ತಿರುವುದರ ಬಹಿರಂಗ ಕೃತ್ಯ ಹಾಗೂ ಕ್ರೂರ ಅಣಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರದಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ಭೀಕರ ಅತ್ಯಾಚಾರ ಮತ್ತು ಕಗ್ಗೊಲೆಯಾಗುತ್ತಲೆ ಇವೆ.ಯುಪಿಯಲ್ಲಿ ಭೇಟಿ ಬಚಾವೋ ಎಂಬುದು ಸಂಘ ಪರಿವಾರದ ಮುಖವಾಡ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಉತ್ತರ ಪ್ರದೇಶ ಸರಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ಅತ್ಯಾಚಾರಿಗಳ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿದ ಸಂಘಟನೆಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚನೆ ಮಾಡಿ ತನಿಖೆ ನಡೆಸಬೇಕು. ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಯ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಉತ್ತರ ಪ್ರದೇಶ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಶಿವಬಸಪ್ಪ, ಕೆ.ವಿ.ನಾಗರಾಜ್ ಅರಳಸುರಳಿ, ರವಿಕುಮಾರ್, ಮಾನವ ಹಕ್ಕುಗಳ ರಕ್ಷಣೆ ಮತ್ತು ಭಷ್ಟಾಚಾರ ನಿರ್ಮೂಲನಾ ಸಮಿತಿ ಪ್ರಮುಖರಾದ ಎಸ್.ಎಲ್ ನಿಖಿಲ್, ನರಹಿಂಹ ಹಸೂಡಿ, ಬಿಸ್‌ಪಿ ಪಾರ್ಟಿಯ ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಜಿಲ್ಲಾ ಸಂಯೋಜಕ ಎಚ್.ಎಂ ಶ್ರೀನಿವಾಸ್, ವಿಜಯಲಕ್ಷ್ಮೀ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News