ಕೇಂದ್ರ ಸರಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಸತೀಶ್ ಜಾರಕಿಹೊಳಿ ಆರೋಪ

Update: 2020-10-05 12:35 GMT

ಬೆಳಗಾವಿ, ಅ.5: ಉಪ ಚುನಾವಣೆ ಬಂದ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿಸುವ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ್ದು, ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ಸೋಮವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಆರೋಪಿಸಿದ್ದೇವೆ. ಆದರೂ ದುರುಪಯೋಗ ಪಡಿಸಿಕೊಳ್ಳುತ್ತಲೇ ಇದೆ. ಕಾಂಗ್ರೆಸ್ ಪಕ್ಷ ದೊಡ್ಡ ಶಕ್ತಿಯನ್ನು ಹೊಂದಿದ್ದು, ಉಪ ಚುನಾವಣೆಯನ್ನು ಎಲ್ಲರೂ ಒಟ್ಟಾಗಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಬಿಐ ತನಿಖಾ ಸಂಸ್ಥೆಯು ಡಿಕೆಶಿ ಅವರ ಮನೆ, ಕಚೇರಿಗಳ ಮೇಲೆ ಹಲವು ಬಾರಿ ದಾಳಿ ನಡೆಸಿದೆ. ಡಿಕೆಶಿ ಅವರು ಈ ಎಲ್ಲ ದಾಳಿಗಳನ್ನು ಕಾನೂನಾತ್ಮಕವಾಗಿ ಹೆದರಿಸಿದ್ದಾರೆ. ಇನ್ನು ಮುಂದೆಯೂ ಅವರಿಗೆ ಕಾನೂನಿನಲ್ಲಿ ಗೆಲವು ಸಿಗಲಿದೆ ಎಂದು ತಿಳಿಸಿದರು.

ವಿಧಾನಸಭೆಯ ಉಪ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಪ್ರಚಾರದ ಕಾರ್ಯದಲ್ಲಿ ಕಾಂಗ್ರೆಸ್ ನಾಯಕರುಗಳು ನಿರತರಾಗಿದ್ದಾರೆ. ಈ ಚುನಾವಣೆಯಲ್ಲಿ ನಮ್ಮದೇ ಅಭ್ಯರ್ಥಿಗಳು ಜಯಗಳಿಸುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News