ಅಹಂಕಾರದ ಪ್ರವೃತ್ತಿ ಮುಂದುವರಿಸಿದರೆ ಕಾಂಗ್ರೆಸ್ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಲಿದೆ: ಎಚ್‍ಡಿಕೆ ವಾಗ್ದಾಳಿ

Update: 2020-10-05 13:07 GMT

ಬೆಂಗಳೂರು, ಅ.5: ಜೆಡಿಎಸ್‍ನಿಂದ ಪ್ರವರ್ದಮಾನಕ್ಕೆ ಬಂದಿದ್ದ, ಜೆಡಿಎಸ್‍ನಿಂದಲೇ ಡಿಸಿಎಂ ಆದ ನಾಯಕರೊಬ್ಬರು, ಸಭೆಯೊಂದರಲ್ಲಿ ಜೆಡಿಎಸ್ ಮುಖಂಡರನ್ನು ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಜೆಡಿಎಸ್ ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್‍ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟರ್ ನಲ್ಲಿ ಕಿಡಿಗಾರಿದ್ದಾರೆ.

ಭಾರತದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಪರಿಸ್ಥಿತಿಯಲ್ಲಿದೆ, ಯಾವ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಸರಕಾರ ರಚನೆ ಮಾಡಿದೆ? ಎಲ್ಲೆಲ್ಲಿ ಯಾರು ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲಿಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಜೆಡಿಎಸ್ ಉಪ್ಪು ತಿಂದ ಆ ಮಹಾನ್ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡುವರೇ? ಎಂದು ಅವರು ಪ್ರಶ್ನಿಸಿದ್ದಾರೆ.

ಮಿತ್ರ ಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕಾರವಾಗಿರುವ, ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್ ತನ್ನ ಅಹಂಕಾರದ ಪ್ರವೃತ್ತಿ ಮುಂದುವರಿಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುವುದರಲ್ಲಿ ಅನುಮಾನಗಳಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

2018ರ ಚುನಾವಣೆಯಲ್ಲಿ ‘ಮಹಾನ್ ನಾಯಕರ’ ‘ಅಪ್ಪನಾಣೆ’ ‘ತಿಪ್ಪರಲಾಗ’ದ ಸವಾಲುಗಳನ್ನು ಜನ ಸೋಲಿಸಿದ್ದಾರೆ. ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು ‘ಅಪ್ಪನಾಣೆ’ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಈ ಉಪ ಚುನಾವವಣೆಯಲ್ಲೂ ಅವರಿಗೆ ತಕ್ಕ ಉತ್ತರ ಸಿಗಲಿದೆ. ಅದಕ್ಕಾಗಿ ಕಾಯಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಮೇಲೆ ನಿಯತ್ತಿದ್ಯಾ?: ನೀವು ಯಾವ ಪಕ್ಷಕ್ಕೆ ತಾನೇ ನೀಯತ್ತಾಗಿದ್ದೀರಿ ಸಿದ್ದರಾಮಯ್ಯನವರೇ? ನೀವು ಉಂಡ ಮನೆಗೆ ದ್ರೋಹ ಬಗೆದವರು. ನಿಮ್ಮ ಶಿಷ್ಯಂದಿರನ್ನ ನೀವೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರಿಸಿ ಬಿಜೆಪಿನ ಅಧಿಕಾರಕ್ಕೆ ತಂದ್ರಿ. ಡಿಸಿಎಂ ಮಾಡಿದ ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ ಅಂತೀರಲ್ಲ, ಹೋಗಲಿ ನಿಮ್ಮನ್ನ ಸಿಎಂ ಮಾಡಿದ ಕಾಂಗ್ರೆಸ್ ಮೇಲಾದ್ರು ನೀಯತ್ತಿದ್ಯಾ? ಎಂದು ಜೆಡಿಎಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News