ಡಿಕೆಶಿ ನಿವಾಸದ ಮೇಲಿನ ಸಿಬಿಐ ದಾಳಿ ಖಂಡಿಸಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ

Update: 2020-10-05 14:20 GMT

ಬೆಂಗಳೂರು, ಅ. 5: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳ ದಿಢೀರ್ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಿವಕುಮಾರ್ ಅವರ ಬೆಂಬಲಿಗರು ಬೆಂಗಳೂರು, ಮಂಗಳೂರು, ಬೆಳಗಾವಿ, ರಾಮನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳ್ಳಂಬೆಳಗ್ಗೆ ಶಿವಕುಮಾರ್ ಅವರ ಸದಾಶಿವನಗರ, ಕನಕಪುರದ ನಿವಾಸ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಬಿಐ ದಾಳಿ ನಡೆದ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸದಾಶಿವನಗರ ನಿವಾಸದ ಸಮೀಪಕ್ಕೆ ಧಾವಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಮಧ್ಯೆ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು.

`ತುಮಕೂರಿನ ಶಿರಾ ಕ್ಷೇತ್ರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಸೋಲಿನ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ, ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡು ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಬಿಜೆಪಿ ದ್ವೇಷದ ರಾಜಕಾರಣದಿಂದ ಕಾಂಗ್ರೆಸ್ ಮುಖಂಡರ ಮಾನಸಿಕ ಸ್ಥೈರ್ಯ ಕುಂದಿಸಲು ಸಾಧ್ಯವಿಲ್ಲ. ಬಿಜೆಪಿಗೆ ತಾಕತ್ತಿದ್ದರೆ ಸಿಎಂ ಬಿಎಸ್‍ವೈ ಮತ್ತವರ ಪುತ್ರನ ಭ್ರಷ್ಟಾಚಾರ ಬಯಲಿಗೆ ಎಳೆಯಲಿ' ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಿಗಿ ಪೊಲೀಸ್ ಭದ್ರತೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲಿನ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಇಲ್ಲಿನ ಬಳ್ಳಾರಿ ರಸ್ತೆಯಲ್ಲಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲದೆ, ಕಚೇರಿಯ ಸುತ್ತಲೂ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದು, ಸಿಬಿಐ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರಿಗೆ ಕಚೇರಿ ಪ್ರವೇಶ ನಿರ್ಬಂಧಿಸಲಾಗಿದೆ.

ಅಲ್ಲದೆ, ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಶಿವಕುಮಾರ್ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸದಾಶಿವನಗರದ ನಿವಾಸದತ್ತ ಆಗಮಿಸುತ್ತಿದ್ದು, ಅವರನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

'ಈ ದಾಳಿಯ ವಿಚಾರದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಈ ಎಲ್ಲ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ' ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News