ಎಲ್ಲವನ್ನೂ ಮೀರಿ ಗೆದ್ದು ಬರುವ ಶಕ್ತಿ ಡಿ.ಕೆ.ಶಿವಕುಮಾರ್ ಗೆ ಇದೆ: ಎಚ್.ವಿಶ್ವನಾಥ್

Update: 2020-10-05 16:24 GMT

ಮೈಸೂರು,ಅ.5: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದಸರಾ ಆಚರಣೆಗೆ ಅವಕಾಶ ಮಾಡಿಕೊಡುವ ಮೂಲಕ ಬಂಬೂ ಸವಾರಿ ಮಾಡಲು ಹೊರಟಿದ್ದೀರಾ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಸೋಂಕಿತ ಪ್ರಕರಣಗಳಿದ್ದರೆ ಮೈಸೂರಿನಲ್ಲಿ ಎರಡು ದಿನದಿಂದ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಈ ನಡುವೆ ದಸರಾ ಮಾಡಲು ಅವಕಾಶ ಮಾಡಿಕೊಡಲಾಗಿದೆ. ನೀವೇನು ಜಂಬೂ ಸವಾರಿ ಮಾಡುತ್ತಿದ್ದೀರೋ? ಇಲ್ಲ ಬಂಬೂ ಸವಾರಿ ಮಾಡಲು ಹೊರಟಿದ್ದೀರೋ ಎಂದು ಕಿಡಿಕಾರಿದರು.

ಎರಡು ಸಾವಿರ ಮಂದಿಯನ್ನು ಸೇರಿಸಿ ದಸರಾ ಮಾಡುತ್ತೇನೆ ಎಂದರೆ ಅಲ್ಲಿ ಹತ್ತು ಸಾವಿರ ಮಂದಿ ಸೇರುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳು, ಕುಟುಂಬಸ್ಥರು, ಮಾಧ್ಯಮದವರು ಸೇರಿ ಹತ್ತು ಸಾವಿರ ಮಂದಿ ಆಗುತ್ತಾರೆ. ಈಗಲೇ ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗುತ್ತಿಲ್ಲ. ಆ ಮೇಲೆ ಹೊಸ ಆಸ್ಪತ್ರೆ ನಿರ್ಮಿಸಬೇಕಾಗುತ್ತದೆ. ಇದು ತುಂಬಾ ಗಂಭೀರವಾದ ವಿಷಯ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಿದ್ದೇನೆ. ಸರಳ ದಸರಾ ಅಂದರೆ ಸಾಂಕೇತಿಕವಾಗಿ ತಾಯಿ ಶ್ರೀಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬೇಕು ಅಷ್ಟೇ. ಉಳಿದ ಯಾವ ಕಾರ್ಯಕ್ರಮಗಳೂ ಇಂತಹ ಪರಿಸ್ಥಿತಿಯಲ್ಲಿ ಬೇಕಿಲ್ಲ ಎಂದರು.

ಕೋತಿ ಕುಣಿದರೂ ಜನ ಸೇರುತ್ತಾರೆ. ಇನ್ನು ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದರೆ ಸೇರುವುದಿಲ್ಲವೆ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಹೋಗಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ಯಾರು ಹೊಣೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಡಳಿತಕ್ಕೆ ಈ ಗಾಂಭೀರ್ಯತೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಹಿರಿಯ ಮುಖಂಡರು ಈ ಬಗ್ಗೆ ಅರ್ಥ ಮಾಡಿಸುತ್ತಿಲ್ಲ. ದಸರಾ ಮಾಡಿ ಅಂತ ಹೇಳುತ್ತಿದ್ದಾರೆ. ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಅವರು ಜಿಲ್ಲಾ ಮಂತ್ರಿಗಳಿಗೆ ಸಲಹೆ ಕೊಡಬೇಕು. ಅದನ್ನು ಬಿಟ್ಟು ದಸರಾ ಮಾಡಿ ಅಂತ ಹೇಳುವುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಡಿ.ಕೆ.ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದೆಲ್ಲ ಸತ್ಯವಲ್ಲ. ಅವರು ಹೇಳಿದ ತಕ್ಷಣ ಅದು ವೇದವಲ್ಲ. ದೇಶದ ಆರ್ಥಿಕ ಪರಿಸ್ಥಿತಿ, ದೇಶದ ಆರ್ಥಿಕ ಅಪರಾಧಗಳ ಬಗ್ಗೆ ಒಂದು ಇಲಾಖೆ ಇದೆ. ಆ ಇಲಾಖೆ ಕಾಲ ಕಾಲಕ್ಕೆ ತನಿಖೆ ನಡೆಸುತ್ತೆ. ಅದೆಲ್ಲವನ್ನೂ ಮೀರಿ ಬರುವ ಶಕ್ತಿ ಡಿ.ಕೆ.ಶಿವಕುಮಾರ್ಗೆ ಇದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ, ಹೀಗಾಗಿ ಗೊತ್ತು. ಇದರಿಂದ ಅವರು ಗೆದ್ದು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುನ್ನಿರತ್ನಗೆ ಟಿಕೆಟ್ ನೀಡಬೇಕು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮುನಿರತ್ನ ಅವರು ಕೂಡ ಕಾರಣ. ಹೀಗಾಗಿ ಅವರಿಗೆ ಆರ್.ಆರ್.ನಗರ ಕ್ಷೇತ್ರದಿಂದ ಟಿಕೆಟ್ ನೀಡಲೇಬೇಕು. ಅವರ ಹೆಸರನ್ನು ಫೈನಲ್ ಮಾಡಬೇಕು ಎಂದು ಆಗ್ರಹಿಸಿದರು.

ಆ ಕ್ಷೇತ್ರದಿಂದ ಸ್ಪರ್ಧಿಸಲು ಇಬ್ಬರ ಹೆಸರನ್ನು ಕಳುಹಿಸುವ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಏನಾದರೂ ಚರ್ಚೆ ಮಾಡಿಕೊಳ್ಳಲಿ. ಯಾರ ಹೆಸರನ್ನಾದರೂ ಕಳುಹಿಸಿಕೊಳ್ಳಲಿ. ಆದರೆ ಎರಡು ಹೆಸರು ಕಳುಹಿಸಿರುವುದು ತಪ್ಪು. ಸರ್ಕಾರ ಅಧಿಕಾರಕ್ಕೆ ಬರಲು ಸಹಾಯ ಮಾಡಿಲ್ವಾ? ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿಲ್ವಾ? ಮುನಿರತ್ನ ಅವರ ಹೆಸರನ್ನು ಅಂತಿಮ ಮಾಡಬೇಕಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News